ಮಂಗಳೂರು: 2028ರಲ್ಲಿ ಶತಮಾನೋತ್ಸವ ಆಚರಿಸಲಿರುವ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ 'ತುಳುವ ಮಹಾಸಭೆ ಇಂಟರ್ನ್ಯಾಷನಲ್', ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಭಾಗವಾಗಿ ಕತಾರ್, ಒಮಾನ್ ಹಾಗೂ ನೈಜೀರಿಯಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಸಂಸ್ಥೆಯ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಈ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ. ಕತಾರ್ ಘಟಕದ ಅಧ್ಯಕ್ಷರಾಗಿ ಪ್ರಖ್ಯಾತ ಉದ್ಯಮಿ ಹಾಗೂ ಎ.ಟಿ.ಎಸ್. ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಮೂಡಂಬೈಲ್ ರವಿ ಶೆಟ್ಟಿ, ಒಮಾನ್ ಘಟಕದ ಅಧ್ಯಕ್ಷರಾಗಿ ಅಬೀರ್ ಗ್ರೂಪ್ ಆಫ್ ಕಂಪನೀಸ್ನ ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕ ಮಲ್ಲಾರ್ ಶಶಿಧರ ಶೆಟ್ಟಿ ಮತ್ತು ನೈಜೀರಿಯಾ ಘಟಕದ ಅಧ್ಯಕ್ಷರಾಗಿ ಎವರೆಸ್ಟ್ ಮೆಟಲ್ಸ್ ಸಂಸ್ಥೆಯ ಖರೀದಿ ಪ್ರಬಂಧಕ ಹಾಗೂ ಸಾಂಸ್ಕೃತಿಕ ಸಂಘಟಕ ಶರತ್ ಕುಮಾರ್ ಶೆಟ್ಟಿ ನೇಮಕಗೊಂಡಿದ್ದಾರೆ.
ಡಾ. ರವಿ ಶೆಟ್ಟಿ ಅವರು ಕತಾರ್ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸಮಾಜಸೇವೆ ಮತ್ತು ಉದ್ಯೋಗಾವಕಾಶ ಕಲ್ಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಲ್ಲಾರ್ ಶಶಿಧರ ಶೆಟ್ಟಿ ಅವರು ಒಮಾನ್ನಲ್ಲಿ ಐದು ದಶಕಗಳಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ತುಳು ಲಿಪಿ ಪ್ರಚಾರ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ನೈಜೀರಿಯಾದ ಶರತ್ ಕುಮಾರ್ ಶೆಟ್ಟಿ ಅವರು ಯಕ್ಷಗಾನ ಭಾಗವತರಾಗಿ, ಹರಿಕಥಾ ಪ್ರವಚನಕಾರರಾಗಿ ವಿದೇಶದಲ್ಲೂ ಕನ್ನಡ-ತುಳು ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನೂತನ ಅಧ್ಯಕ್ಷರ ಸಂಘಟನಾ ಸಾಮರ್ಥ್ಯ ಹಾಗೂ ತುಳು ನಾಡು, ನುಡಿ, ಸಂಸ್ಕೃತಿಯ ಸೇವೆ ಪರಿಗಣಿಸಿ ಈ ಹೊಣೆಗಾರಿಕೆ ನೀಡಲಾಗಿದ್ದು, ತುಳುವರ್ಲ್ಡ್ ಫೌಂಡೇಶನ್ ಹಾಗೂ ಮಹಾಸಭೆಯ ಕೇಂದ್ರೀಯ ಸಮಿತಿಯ ಮುಖಂಡರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.