ಉಜಿರೆ : ಉಜಿರೆಯ ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ಸಿ.ಸಿ. ಕ್ಯಾಮೆರಾ ಅಳವಡಿಸುವಿಕೆ ಮತ್ತು ಸರ್ವಿಸ್’ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಉಜಿರೆ ವರ್ತಕರ ಸಂಘದ ಅಧ್ಯಕ್ಷ ಹಾಗೂ ‘ರಮ್ಯ ಫ್ಯಾನ್ಸ್’ ಮಾಲಕ ಶ್ರೀ ಪ್ರಸಾದ್ ಬಿ.ಎಸ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಉದ್ಯಮದಲ್ಲಿ ಯಶಸ್ಸು ಕಾಣಲು ಬೇರೆಯವರ ಬೆಂಬಲಕ್ಕಾಗಿ ಕಾಯದೆ, ಸ್ವಂತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಅವರು ಶಿಬಿರಾರ್ಥಿಗಳಿಗೆ ಕರೆ ನೀಡಿದರು. ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ತಮ್ಮ ಉದ್ಯಮ ಪಯಣದ ಅನುಭವಗಳು, ಉದ್ಯಮದ ಬೆಳವಣಿಗೆಯ ವಿವಿಧ ಹಂತಗಳು, ಎದುರಾಗುವ ಸವಾಲುಗಳು ಹಾಗೂ ಯಶಸ್ಸಿನ ಸೂತ್ರಗಳ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಬಿ.ಪಿ. ವಿಜಯ ಕುಮಾರ್ ಅವರು ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಂಡು ಉದ್ಯಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ತರಬೇತಿಯ ಅತಿಥಿ ಉಪನ್ಯಾಸಕ ಶ್ರೀ ಗುರುರಾಜ್ ಕೆ.ಎಸ್. ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ತರಬೇತಿಯನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ಜಗದೀಶ್ ಹಾಗೂ ಅಶೋಕ್ ತಮ್ಮ ತರಬೇತಿಯ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವು ರಮೇಶ್, ನಿಖಿಲ್ ಹಾಗೂ ಜಗನ್ನಾಥ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಂಸ್ಥೆಯ ನಿರ್ದೇಶಕ ಶ್ರೀ ಸುನಿಲ್ ಜಿ. ನಾಯ್ಕೆ ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಶ್ರೀ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಉಪನ್ಯಾಸಕ ಶ್ರೀ ಕೆ. ಕರುಣಾಕರ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.