image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಆಗಸ್ಟ್ 8, 9 ರಂದು ಉಚಿತ ಕೃತಕ ಕೈಕಾಲು ಜೋಡಣೆ ಶಿಬಿರ

ಮಂಗಳೂರಿನಲ್ಲಿ ಆಗಸ್ಟ್ 8, 9 ರಂದು ಉಚಿತ ಕೃತಕ ಕೈಕಾಲು ಜೋಡಣೆ ಶಿಬಿರ

ಮಂಗಳೂರು : ಮಂಗಳೂರಿನ ಜೆಪ್ಪು ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯದಲ್ಲಿ ಆಗಸ್ಟ್ 8 ಮತ್ತು 9ರಂದು ಉಚಿತ ಕೃತಕ ಕೈಕಾಲು ಜೋಡಣೆ ಹಾಗೂ ವಿಕಲಾಂಗ ಸಲಕರಣೆಗಳ ವಿತರಣಾ ಶಿಬಿರ ಆಯೋಜಿಸಲಾಗಿದೆ. ಕರ್ನಾಟಕ ಅನಿವಾಸಿ ಭಾರತೀಯ ಒಕ್ಕೂಟ-ಜಿದ್ದಾ, ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್, ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶಿನಿ ನಿಲಯ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಆಗಸ್ಟ್ 8ರಂದು ಬೆಳಗ್ಗೆ 9.30ಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಶಿಬಿರವನ್ನು ಉದ್ಘಾಟಿಸಲಿದ್ದು, ಒಕ್ಕೂಟದ ಅಧ್ಯಕ್ಷ ಹಬೀಬ್ ಆರ್. ಅಹ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಎ.ಕೆ.ಎಂ. ಅಶ್ರಫ್, ಐವನ್ ಡಿಸೋಜ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಥಮವಾಗಿ ನೋಂದಾಯಿಸಿದ 100 ಬಡ ಫಲಾನುಭವಿಗಳಿಗೆ ತಪಾಸಣೆ ನಡೆಸಿ, ಜೈಪುರ ಬ್ರಾಂಡಿನ ಹಗುರ ಹಾಗೂ ಗುಣಮಟ್ಟದ ಕೃತಕ ಅಂಗಾಂಗಗಳನ್ನು ಸ್ಥಳದಲ್ಲೇ ತಯಾರಿಸಿ ಅದೇ ದಿನ ಜೋಡಿಸಿಕೊಡಲಾಗುತ್ತದೆ.

ಅಪಘಾತ, ಗ್ಯಾಂಗ್ರಿನ್, ಕ್ಯಾನ್ಸರ್ ಅಥವಾ ಜನ್ಮಜಾತ ವಿಕಲಾಂಗತೆಯಿಂದ ಕೈಕಾಲು ಕಳೆದುಕೊಂಡವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಅನಂತಾಡಿ ಅವರಿಂದ ಪ್ರೇರಣಾ ತರಗತಿ ನಡೆಯಲಿದ್ದು, ಆಯ್ದ ಅಶಕ್ತರಿಗೆ ಗಾಲಿಕುರ್ಚಿ, ವಾಕರ್ ಮತ್ತು ವಾಟರ್ ಬೆಡ್‌ಗಳನ್ನು ವಿತರಿಸಲಾಗುವುದು. ಒಟ್ಟು ಸುಮಾರು ₹25 ಲಕ್ಷ ವೆಚ್ಚದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ