ಮಂಗಳೂರು; ಸಹಕಾರ ರಂಗದ ಮೂಲಕ ಜಿಲ್ಲೆಯ ವಿವಿಧ ಕ್ಷೇತ್ರ ಗಳ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಮೊಳಹಳ್ಳಿ ಶಿವರಾಯರು ತೋರಿಸಿಕೊಟ್ಟಿದ್ದಾರೆ. ಅವರ ಸಹಕಾರಿ ರಂಗದ ಮೂಲಕ ಮಾಡಿದ ಕೆಲಸಗಳು ನಮಗೆ ಇಂದಿಗೂ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಅವರು ಮಂಗಳವಾರ ಎಸ್ ಸಿಡಿಸಿಸಿ ಬ್ಯಾಂಕ್ ನ ಸಭಾಂಗಣದಲ್ಲಿ ಮೊಳಹಳ್ಳಿ ಶಿವರಾಯರ ಜನ್ಮ ದಿನಾಚರಣೆ ಗೆ ಚಾಲನೆ ನೀಡಿ, ಅರವಿಂದ ಚೊಕ್ಕಾಡಿಯವರು ಬರೆದ ಮೊಗೆದಷ್ಟು ಬೆಳೆಯುವ ಮೊಳಹಳ್ಳಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡುತ್ತಾ , ಮೊಳ ಹಳ್ಳಿ ಶಿವರಾಯರು ಆರು ದಶಕಗಳ ಕಾಲ ಸಹಕಾರಿ ರಂಗವನ್ನು ಕಟ್ಟಿ ಬೆಳೆಸಿ,ಸಹಕಾರಿ ರಂಗದ ಮೂಲಕ ಏನೆಲ್ಲಾ ಮಾಡಬಹುದು ಅದನ್ನು ಮಾಡಿ ತೋರಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಇತರ ವಾಣಿಜ್ಯ ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕ್ ಗಳು ಒಂದರೊಳಗೆ ಒಂದು ವಿಲೀನ ಗೊಳ್ಳುವ ಸಮಯದಲ್ಲೂ, ಸಹಕಾರಿ ಬ್ಯಾಂಕ್ ಜಿಲ್ಲೆಯಲ್ಲಿ ದೃಢವಾಗಿ ಬೆರೂರಿವೆ.ಗ್ರಾಹಕರಿಗೆ ಸೇವೆ ನೀಡುತ್ತಿವೆ.ಇದರ ಹಿಂದೆ ಮೊಳಹಳ್ಳಿ ಶಿವರಾಯರ ಮಹತ್ವದ ಕೊಡುಗೆ ಇದೆ.ಅವರ ಆದರ್ಶಗಳು ಮುಂದೆಯೂ ಸಹಕಾರಿ ರಂಗದ ಬೆಳವಣಿಗೆಗೆ ಸಹಕಾರಿ ಯಾಗಲಿ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹಾರೈಸಿದರು.
ಆಕರ ಗ್ರಂಥ ರಚಿಸಿದ ಲೇಖಕ ಅರವಿಂದ ಚೊಕ್ಕಾಡಿಯವರು ಮಾತನಾಡುತ್ತಾ,ಮಿತಭಾಷಿ ಮೊಳಹಳ್ಳಿ ಶಿವರಾಯರು ಕರಾವಳಿಯನ್ನು ಕಟ್ಟಿದ ಮೂವರು ಮಹನೀಯರಾದ ಸಾಮಾಜಿಕ ಮುಖಂಡ ಕುದ್ಮುಲ್ ರಂಗರಾವ್,ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವರಾವ್,ಅವರ ಜೊತೆ ಸಹಕಾರಿ ರಂಗದ ಮೂಲಕ ಜನರಿಗೆ ಆರ್ಥಿಕ ಶಕ್ತಿಯನ್ನು ನೀಡಿದವರು ಮೊಳಹಳ್ಳಿ ಶಿವರಾಯರು.ಸಹಕಾರಿ ಕ್ಷೇತ್ರ ಸೂಕ್ಷ್ಮ ಕ್ಷೇತ್ರ, ಎಲ್ಲಾ ಜಾತಿ,ಧರ್ಮದ ಜನರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಮೊಳಹಳ್ಳಿ ಯವರು ಅದನ್ನು ನಡೆಸಿ ಕೊಂಡು ಬಂದಿದ್ದಾರೆ. ಅದನ್ನು ಡಾ.ಎಂ.ಎನ್ ರಾಜೇಂದ್ರ ಕುಮಾರ್ ವಿಸ್ತರಿಸಿ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮೊಳಹಳ್ಳಿ ಶಿವರಾಯರ ಸಹಕಾರಿ ರಂಗದ ಚಿಂತನೆಯ ಮೂಲಕ ಸಮಗ್ರ ಅಭಿವೃದ್ಧಿಯ
ಪರಿಕಲ್ಪನೆ ಇತ್ತು.ಅದರಿಂದ ಪುತ್ತೂರಿನಲ್ಲಿ ಬೀದಿ ದೀಪ ಆರಂಭಿಸಲು ಕಾರಣ ರಾದರು,ಪಾಣೆ ಮಂಗಳೂರು ಸೇತುವೆ ನಿರ್ಮಾಣಕ್ಕೆ ಜನರಿಂದ ದೇಣಿಗೆ ಸಂಗ್ರಹಿದರು.ದಸರಾ ಉತ್ಸವವನ್ನು ಪುತ್ತೂರಿನಲ್ಲಿ ಆರಂಭಿಸಿದರು, ಹೈನುಗಾರಿಕೆ ಯನ್ನು ಸಹಕಾರಿ ರಂಗದ ಮೂಲಕ ಆರಂಭಿಸಿದರು. ಮುದ್ರಣಾಲಯವನ್ನು ಆರಂಭಿಸಿದರು.ಸಹಕಾರಿ ರಂಗ ಬಲಿಷ್ಠ ರಂಗವಾಗಿ ಬೆಳೆಯಲು ಪೂರಕವಾದ ಎಲ್ಲಾ ಕೆಲಸವನ್ನು ಮೊಳಹಳ್ಳಿ ಮಾಡಿ ಮಾದರಿಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಎಸ್ ಸಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ , ನಿರ್ದೇಶಕರಾದ ಜಯರಾಮ ರೈ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ,ಎಸ್ ಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್,ಕ್ಯಾಂಪ್ಕೋ ಅಧ್ಯಕ್ಷ ಎಸ್ ಎನ್ ಸತೀಶ್ಚಂದ್ರ , ಹಾಗೂ ಇತರ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಸಹಕಾರಿ ಯೂನಿಯನ್ ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು ಸ್ವಾಗತಿಸಿದರು.ಜಿಲ್ಲಾ ಸಹಕಾರಿ ಯೂನಿಯನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ ವಂದಿಸಿದರು.