ಮಂಗಳೂರು : ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ 2025-26ನೇ ಆರ್ಥಿಕ ವರ್ಷದಲ್ಲಿ 14.19 ಲಕ್ಷ ರೂಪಾಯಿಗಳ ಸಾರ್ವಕಾಲಿಕ ಗರಿಷ್ಠ ಲಾಭ ಗಳಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದು ಹೊಸ ಇತಿಹಾಸ ನಿರ್ಮಿಸಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ 'ಸಹಕಾರ ರತ್ನ' ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮತ್ತು ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಯೂನಿಯನ್ ಈ ಅಪರೂಪದ ಸಾಧನೆಗೆ ಪಾತ್ರವಾಗಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದಾಯ ಮತ್ತು ಲಾಭ: ವರ್ಷಾಂತ್ಯದಲ್ಲಿ ಯೂನಿಯನ್ 8,91,120 ರೂ. ಸದಸ್ಯತ್ವ ಶುಲ್ಕ ಹಾಗೂ 68,72,929.15 ರೂ. ವಿವಿಧ ನಿಧಿಗಳನ್ನು ಸಂಗ್ರಹಿಸಿದ್ದು, ಒಟ್ಟು 14,19,121 ರೂ. ನಿವ್ವಳ ಲಾಭ ದಾಖಲಿಸಿದೆ. ಶೇ. 10 ರಷ್ಟು ಡಿವಿಡೆಂಡ್: ರಾಜ್ಯದ 30 ಸಹಕಾರಿ ಯೂನಿಯನ್‌ಗಳ ಪೈಕಿ ಮೊದಲ ಬಾರಿಗೆ ತನ್ನ ಸದಸ್ಯ ಸಂಘಗಳಿಗೆ ಶೇಕಡಾ 10 ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದೆ. ಸದಸ್ಯತ್ವ ಸಂಖ್ಯೆ: 2026ರ ಮಾರ್ಚ್ 31ರ ಅಂತ್ಯಕ್ಕೆ ಯೂನಿಯನ್‌ನಲ್ಲಿ ಒಟ್ಟು 382 ಸಹಕಾರಿ ಸಂಘಗಳು ಸದಸ್ಯತ್ವ ಪಡೆದುಕೊಂಡಿವೆ. ಶಿಕ್ಷಣ ನಿಧಿ ಸಲ್ಲಿಕೆ: ರಾಜ್ಯ ಸಹಕಾರ ಮಹಾಮಂಡಳಕ್ಕೆ ವರ್ಷಗಳಿಂದ ಶಿಸ್ತಿನಿಂದ ಶಿಕ್ಷಣ ನಿಧಿಯನ್ನು ಸಲ್ಲಿಸುತ್ತಾ ಬಂದಿರುವ ಹೆಗ್ಗಳಿಕೆಯೂ ಈ ಯೂನಿಯನ್‌ಗಿದೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಯೂನಿಯನ್ ವತಿಯಿಂದ ಸಂಘಗಳ ಆಡಳಿತ ಮಂಡಳಿ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ 'ಕ್ಲಸ್ಟರ್ ತರಬೇತಿ' ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಯುವಜನತೆಯನ್ನು ಸಹಕಾರ ಕ್ಷೇತ್ರಕ್ಕೆ ಆಕರ್ಷಿಸಲು ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಯೂನಿಯನ್‌ನ ಅಧ್ಯಕ್ಷರಾಗಿ ಹಾಗೂ ರಾಜ್ಯ ಮಹಾಮಂಡಲದ ಆದೇಶದಂತೆ ಎಸ್.ವಿ. ಹೀರೆಮಠ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1962ರಲ್ಲಿ ಸ್ಥಾಪನೆಯಾದ ಈ ಯೂನಿಯನ್‌ಗೆ ಈವರೆಗೆ 11 ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಬಿ. ಪ್ರಭಾಕರ ರಾವ್ ಅವರು ಮೊದಲ ಅಧ್ಯಕ್ಷರಾಗಿದ್ದರು.