ಉಳ್ಳಾಲ: ವಿದ್ಯುತ್ ದುರಸ್ತಿ ಕಾರ್ಯದ ವೇಳೆ ಮೆಸ್ಕಾಂ ಲೈನ್‌ಮ್ಯಾನ್ ಒಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಣದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಅಂಬಿಕಾರೋಡ್, ಪಿಲಾರು ನಿವಾಸಿ ಶೇಖ್ ಝಮೀರ್ (49) ಎಂದು ಗುರುತಿಸಲಾಗಿದೆ. ಅವರು ಮೆಸ್ಕಾಂನಲ್ಲಿ ಲೈನ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಉಚ್ಚಿಲ ನಯಾಪಟ್ಣದ ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ದೋಷ ಉಂಟಾಗಿರುವ ಬಗ್ಗೆ ಮೆಸ್ಕಾಂಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಶೇಖ್ ಝಮೀರ್ ಹಾಗೂ ಅವರ ಸಹೋದ್ಯೋಗಿ ಸಂಗಪ್ಪ ಸ್ಥಳಕ್ಕೆ ತೆರಳಿದ್ದರು. ದುರಸ್ತಿ ಕಾರ್ಯ ಆರಂಭಿಸುವ ವೇಳೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ ಎಂದು ಭಾವಿಸಿ ಝಮೀರ್ ಟ್ರಾನ್ಸ್‌ಫಾರ್ಮರ್ ಏರಿದ್ದಾರೆ. ಆದರೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ ಅವರು ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆ ಬಿದ್ದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಶೇಖ್ ಝಮೀರ್ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.