ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 4ರಂದು (ಆಗಸ್ಟ್ 4, 2026) ಜಿಲ್ಲೆಯ ವಿವಿಧ ತಾಲೂಕುಗಳ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಯವರ ಆದೇಶದ ಪ್ರಕಾರ, ಮಂಗಳೂರು ಉಪವಿಭಾಗದ ಮಂಗಳೂರು, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಹಾಗು ಉಳ್ಳಾಲ ತಾಲೂಕುಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (10ನೇ ತರಗತಿಯವರೆಗೆ) ರಜೆ ನೀಡಲಾಗಿದೆ. ಈ ಆದೇಶವು ಎಲ್ಲಾ ವಸತಿ ಶಾಲೆಗಳಿಗೂ ಅನ್ವಯವಾಗಲಿದೆ.
ಪುತ್ತೂರು ಉಪವಿಭಾಗದ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗು ಕಡಬ ತಾಲೂಕುಗಳಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು (12ನೇ ತರಗತಿಯವರೆಗೆ) ಹಾಗು ಎಲ್ಲಾ ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಆದೇಶವು ವಸತಿ ಶಾಲೆ-ಕಾಲೇಜುಗಳಿಗೂ ಅನ್ವಯಿಸಲಿದೆ.
ಆದೇಶವನ್ನು ಉಲ್ಲಂಘಿಸಿ ತರಗತಿ ನಡೆಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005ರ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಅವರು ಎಚ್ಚರಿಕೆ ನೀಡಿದ್ದಾರೆ.