ಪುತ್ತೂರು : ವಿಶ್ವದಲ್ಲಿಯೇ ಭಾರತ ಎಲ್ಲ ಕ್ಷೇತ್ರದಲ್ಲೂ ಉತ್ತಮ ಪ್ರಗತಿಯನ್ನು ಹೊಂದಿರುವ ದೇಶವಾಗಿದೆ. ವಿಕಸಿತ ಭಾರತದ ಕನಸು ಹೊಂದಿರುವ ನಾವು ದೇಶದ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ದಕ್ಷತೆ ಹಾಗೂ ಜ್ಞಾನದ ಮೂಲಕ ರಾಷ್ಟ್ರ ಸೇವೆಗೆ ಸಜ್ಜುಗೊಳ್ಳುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ವಿವೇಕಾನಂದ ಪದವಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಡೆದ 'ಕಾರ್ಗಿಲ್ ವಿಜಯ್ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ದೇಶ ಇಂದು ಪ್ರಜಾಸತ್ತಾತ್ಮಕ ದೇಶವಾಗಿ ಉಳಿದಿದೆ ಎಂದಾದರೆ ಅದಕ್ಕೆ ಹಿಂದೂ ಬಹುಸಂಖ್ಯಾತವಾಗಿರುವಂತಹ ನಮ್ಮ ಸಾಂಸ್ಕೃತಿಕ ಬುನಾದಿಯೇ ಕಾರಣ. ದೇಶ ಎಂದರೆ ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆ. ಪ್ರತಿಯೊಬ್ಬ ಯೋಧನ ರಾಷ್ಟ್ರಪ್ರೇಮ ಹಾಗೂ ಆತನ ಬಲಿದಾನದಿಂದಲೇ ಇಂದು ದೇಶ ಸುಭದ್ರವಾಗಿದೆ. ಭಾರತವನ್ನು ವಿಶ್ವಗುರುವನ್ನಾಗಿ ಅಲಂಕರಿಸಲು ಬೇಕಾದ ಕೆಲಸ ಕಾರ್ಯಗಳು ನಮ್ಮಿಂದ ಸಾಧ್ಯವಾಗಲಿ ಎಂದು ಆಶಿಸಿದ ಅವರು, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ವಿವೇಕಾನಂದ ಪದವಿ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ವಿವೇಕಾನಂದ ವಿದ್ಯಾವර්ධಕ ಸಂಘದ ನಿರ್ದೇಶಕರಾದ ಪ್ರೊ. ಶ್ರೀಪತಿ ಕಲ್ಲೂராய ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಹಾಗೂ ನೆಮ್ಮದಿಯ ಜೀವನದ ಹಿಂದೆ ನಮ್ಮ ಯೋಧರ ಅಮೂಲ್ಯ ತ್ಯಾಗ ಅಡಗಿದೆ. ದೇಶದ ಸೈನಿಕರ ನಿರಂತರ ಶ್ರಮ, ತ್ಯಾಗದಿಂದ ದೇಶಕ್ಕಾಗಿ ಮಡಿದ ಸೈನಿಕರು ಹಾಗೂ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಪ್ರತಿಯೊಬ್ಬ ಭಾರತೀಯನೂ ಗೌರವಿಸಬೇಕು ಎಂದರು. ಕಾರ್ಯಕ್ರಮವನ್ನು ಯೋಧ ನಮನ ಗೀತೆಯೊಂದಿಗೆ ಆರಂಭಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸಶಸ್ತ್ರ ಪಡೆಗಳ ವೀರಗಾಥೆಯನ್ನು ಹಾಡಿನ ಮೂಲಕ ಸ್ಮರಿಸಲಾಯಿತು. ಬಳಿಕ ದೇಶಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡಿದ ವೀರಯೋಧರ ಭಾವಚಿತ್ರಕ್ಕೆ ಹಣತೆ ಬೆಳಗಿಸಿ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ವಿವೇಕಾನಂದ ವಿದ್ಯಾವර්ධಕ ಸಂಘದ ನಿರ್ದೇಶಕರಾದ ರವೀಂದ್ರ ಪಿ. ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಪುಷ್ಪಲತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಈ ಸಮಾರಂಭದಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು, ಎನ್ .ಸಿ.ಸಿ ಕೆಡೆಟ್‌ಗಳು ಮತ್ತು ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.