ಧರ್ಮಸ್ಥಳ : ರುಡ್‌ಸೆಟ್ ಸಂಸ್ಥೆ ಉಜಿರೆಯ 44 ವರ್ಷಗಳ ಸೇವಾ ಪಯಣದ ಮಹತ್ವದ ಮೈಲಿಗಲ್ಲಾದ 1000ನೇ ತರಬೇತಿ ಕಾರ್ಯಕ್ರಮವಾದ 'ಛಾಯಾಗ್ರಹಣ ಮತ್ತು ವೀಡಿಯೋಗ್ರಾಫಿ ತರಬೇತಿ'ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕ್ಯಾಮೆರಾದಲ್ಲಿ ಛಾಯಾಚಿತ್ರ ಸೆರೆಹಿಡಿಯುವ ಮೂಲಕ ಚಾಲನೆ ನೀಡಿದರು. ಉದ್ಘಾಟನೆ ನಡೆಸಿ ಮಾತನಾಡಿದ ಅವರು, ಛಾಯಾಗ್ರಾಹಕರು ತಾಳ್ಮೆ, ಏಕಾಗ್ರತೆ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉತ್ತಮ ಛಾಯಾಚಿತ್ರವು ಕೇವಲ ಕ್ಯಾಮೆರಾದಿಂದ ಮೂಡುವುದಿಲ್ಲ; ನೋಡುವ ದೃಷ್ಟಿಕೋನ, ಸಮಯಪ್ರಜ್ಞೆ ಹಾಗೂ ವಿಷಯದ ಆಳವಾದ ಅರಿವಿನಿಂದ ಮೂಡುತ್ತದೆ. ವಿವಿಧ ಕೋನಗಳಿಂದ ವಿಷಯವನ್ನು ಅವಲೋಕಿಸಿ, ಸೂಕ್ತ ಕ್ಷಣವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಛಾಯಾಗ್ರಾಹಕರು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಆರಂಭದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯಕುಮಾರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿ, ರುಡ್‌ಸೆಟ್ ಸಂಸ್ಥೆಯ 44 ವರ್ಷಗಳ ಸೇವಾ ಪಯಣ ಹಾಗೂ ಈ 1000ನೇ ತರಬೇತಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಸುನಿಲ್ ಜಿ. ನಾಯ್ಕ್, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಲೋಹಿತ್ ಜೈನ್ ಹಾಗೂ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಶ್ರೀ ವೀರು ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು.