image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಪ್ರಗತಿ 2026 : ಯುವ ನಾಯಕರು ಪಾಲುದಾರರಾಗಲು ವಿವೇಕ್ ಆಳ್ವ ಕರೆ

ಆಳ್ವಾಸ್ ಪ್ರಗತಿ 2026 : ಯುವ ನಾಯಕರು ಪಾಲುದಾರರಾಗಲು ವಿವೇಕ್ ಆಳ್ವ ಕರೆ

ಮೂಡುಬಿದಿರೆ : 16ನೇ ಆವೃತ್ತಿಯ 'ಆಳ್ವಾಸ್ ಪ್ರಗತಿ–2026' ಬೃಹತ್ ಉದ್ಯೋಗ ಮೇಳದ ಯಶಸ್ವಿ ಆಯೋಜನೆಗಾಗಿ ಯುವ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದ್ದು, ಯುವ ನಾಯಕರು ಈ ಉದ್ಯೋಗ ಮೇಳದ ಅಧಿಕೃತ ಪಾಲುದಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕರೆ ನೀಡಿದ್ದಾರೆ.

ಮಿಜಾರಿನಲ್ಲಿ ಆಯೋಜಿಸಲಾಗಿದ್ದ ಯುವ ನಾಯಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯಾವುದೇ ಲಾಭದ ಉದ್ದೇಶವಿಲ್ಲದೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. ಈ ಬಾರಿಯ ಮೇಳದಲ್ಲಿ 343ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದು, 13ಕ್ಕೂ ಹೆಚ್ಚು ವಲಯಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಹಾಗೂ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಹಾಗೂ ಅನುಭವಸ್ಥರಿಗೂ ಸೂಕ್ತ ಉದ್ಯೋಗ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು.

ಇಂದಿನ ಉದ್ಯೋಗ ಜಗತ್ತಿನಲ್ಲಿ ಕೇವಲ ಪ್ರಮಾಣಪತ್ರಗಳಿಗಿಂತ ಕೌಶಲ್ಯ, ಆತ್ಮವಿಶ್ವಾಸ ಮತ್ತು ಕಾರ್ಯಸಾಮರ್ಥ್ಯಕ್ಕೆ ಹೆಚ್ಚಿನ ಮೌಲ್ಯ ಸಿಗುತ್ತಿದೆ. ಆದ್ದರಿಂದ ಗ್ರಾಮೀಣ ಭಾಗದ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಮೇಳಕ್ಕೆ ಕರೆತಂದು, ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಲು ಪ್ರೇರೇಪಿಸುವ ಜವಾಬ್ದಾರಿ ಯುವ ನಾಯಕರ ಮೇಲಿದೆ ಎಂದು ಹೇಳಿದರು. ಸಂಸ್ಥೆಯ ನೇಮಕಾತಿ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಯಾವುದೇ ಮಧ್ಯವರ್ತಿಗಳು ಅಥವಾ ಶಿಫಾರಸುಗಳಿಗೆ ಅವಕಾಶವಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಗೂ ಅವರ ಅರ್ಹತೆ ಮತ್ತು ಕೌಶಲ್ಯದ ಆಧಾರದ ಮೇಲಷ್ಟೇ ಅವಕಾಶ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಹಿರಿಯರ ಮೌಲ್ಯಾಧಾರಿತ ಜೀವನದೃಷ್ಟಿ ಹಾಗೂ ಜೆನ್-ಝಿ ಪೀಳಿಗೆಯ ಉತ್ಸಾಹ ಒಂದಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. 'ಆಳ್ವಾಸ್ ಪ್ರಗತಿ' ಕೇವಲ ಉದ್ಯೋಗ ಮೇಳವಲ್ಲ, ಇದು ಸಾವಿರಾರು ಯುವಕರ ಜೀವನಕ್ಕೆ ಹೊಸ ದಿಕ್ಕು ನೀಡುವ ಸಾಮಾಜಿಕ ಚಳವಳಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಮೇಳದ ಸಿದ್ಧತೆಗಾಗಿ ಕಳೆದ ಮೂರು ತಿಂಗಳಿನಿಂದ 70ಕ್ಕೂ ಹೆಚ್ಚು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಮೇಳದ ದಿನದಂದು ಸುಮಾರು 2,500 ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಲಿದ್ದಾರೆ. ಹೊರ ಜಿಲ್ಲೆಗಳಿಂದ ಕನಿಷ್ಠ 2,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದರೆ ಗ್ರಾಮೀಣ ಯುವಕರನ್ನು ತಲುಪುವ ಸಂಸ್ಥೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ, ವಿಶ್ವ ಕಬ್ಬಡ್ಡಿ ಚಾಂಪಿಯನ್‍ಶಿಪ್ ವಿಜೇತ ಭಾರತ ತಂಡದ ಆಟಗಾರ್ತಿ ಹಾಗೂ ಆಳ್ವಾಸ್ ವಿದ್ಯಾರ್ಥಿನಿ ಧನಲಕ್ಷ್ಮೀ ಪೂಜಾರಿ ಅವರು ಗುಜರಾತ್ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳ ಯುವ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡರು. ಉಪನ್ಯಾಸಕ ಡಾ. ವಿನಾಯಕ ಭಟ್ ಗಾಳಿಮನೆ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ