ಸುಬ್ರಹ್ಮಣ್ಯ : ದಕ್ಷಿಣ ಭಾರತದ ಹೆಸರಾಂತ ಹಾಗೂ ಪವಿತ್ರ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಇಂದು ರವಿವಾರ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರಿಗೆ ಸೇವೆ ಸಲ್ಲಿಸಿರುವರು. ಭಕ್ತರಿಗೆ ಕುಮಾರ ದಾರ ನದಿಯಲ್ಲಿ ತೀರ್ಥ ಸ್ನಾನಕ್ಕಾಗಿ ಸ್ನಾನ ಘಟ್ಟದ ಪಕ್ಕದಲ್ಲಿ ಡ್ರಮ್ಮಗಳನ್ನ ಇರಿಸಿ ಅದರಲ್ಲಿ ನೀರಿನ ವ್ಯವಸ್ಥೆ ಹಾಗೂ ಶವರ್ ವ್ಯವಸ್ಥೆಗಳನ್ನು ಶ್ರೀ ದೇವಳದಿಂದ ಮಾಡಲಾಗಿತ್ತು. ಇಂದು ಮುಂಜಾನೆಯಿಂದ ಜೋರಾದ ಮಳೆ ಸುರಿಯುತ್ತಿದ್ದರೂ ರಥ ಬೀದಿಯಲ್ಲಿ ಮಳೆಯಲ್ಲಿ ನೆಂದು ಭಕ್ತರು ಶ್ರೀ ದೇವಳದ ಅಂಗಣವನ್ನ ಪ್ರವೇಶಿಸಿದ್ದರು . ಹೊರಾಂಗಣದಲ್ಲಿ ಭಕ್ತರ ಸರತಿಯ ಸಾಲು ತುಂಬಿ ನಿಧಾನವಾಗಿ ಮುಂದಕ್ಕೆ ಚಲಿಸಿ ಶ್ರೀ ದೇವರ ದರ್ಶನ ಹಾಗೂ ತೀರ್ಥ ಪ್ರಸಾದ ಸ್ವೀಕರಿಸಿರುವರು. ಇತ್ತ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶ್ರೀ ದೇವಳದ ಷಣ್ಮುಖ ಪ್ರಸಾದ ಭೋಜನ ಶಾಲೆ ಹಾಗೂ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.
ಶ್ರೀ ದೇವಳದ ಸುತ್ತಮುತ್ತಲಿನ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ತುಂಬಿದ್ದವು. ಆದಿ ಸುಬ್ರಹ್ಮಣ್ಯದಲ್ಲಿ ಕೂಡ ಪಾರ್ಕಿಂಗ್ ಪ್ರದೇಶಗಳಲ್ಲದೆ ಮಾರ್ಗದ ಇಕ್ಕೆಲೆಗಳಲ್ಲಿ ವಾಹನಗಳನ್ನ ನಿಲ್ಲಿಸಲಾಗಿತ್ತು.