image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’, ‘ಜ್ಞಾನ ನಂದನ’ ಕೃತಿಗಳ ಲೋಕಾರ್ಪಣೆ

ಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’, ‘ಜ್ಞಾನ ನಂದನ’ ಕೃತಿಗಳ ಲೋಕಾರ್ಪಣೆ

ಧರ್ಮಸ್ಥಳ : ಶಾಂತಿವನ ಟ್ರಸ್ಟ್ ವತಿಯಿಂದ ಪ್ರಕಟಿಸಲಾದ “ಜ್ಞಾನ ಚಂದನ” ಮತ್ತು “ಜ್ಞಾನ ನಂದನ” ಕೃತಿಗಳನ್ನು ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಅಂಕಣ ಬರಹಗಾರ್ತಿ ದೀಪಾ ಹಿರೇಗುತ್ತಿ ಶನಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದೀಪಾ ಹಿರೇಗುತ್ತಿ, ಅಹಂ ಮತ್ತು ಕೀಳರಿಮೆ ತೊರೆದು ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ ಗೌರವಿಸಬೇಕು. ಬದುಕಿನ ನೋವು-ಸಂಕಟ ಹಾಗೂ ಆಘಾತಗಳನ್ನು ಸಾಧನೆಗೆ ಕಚ್ಚಾವಸ್ತುಗಳನ್ನಾಗಿ ಬಳಸಿ ಉನ್ನತ ಸೇವೆ ಮಾಡಲು ಸಾಧ್ಯವಿದೆ. ಪ್ರತಿಯೊಬ್ಬರಲ್ಲೂ ಸುಪ್ತ ಪ್ರತಿಭೆ ಇದ್ದು, ಶಿಕ್ಷಕರು, ರಕ್ಷಕರು ಮತ್ತು ಮಕ್ಕಳ ಸಂಘಟಿತ ಪ್ರಯತ್ನದಿಂದ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಆದರೆ, ಇಂದು ಕಂಪ್ಯೂಟರ್, ಮೊಬೈಲ್ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳ ಮೋಹದ ಜಾಲಕ್ಕೆ ಸಿಲುಕಿ ಜನರು ಭಾವನಾರಹಿತವಾಗಿ, ಮಾನವೀಯತೆ ಕಳೆದುಕೊಂಡು ಯಂತ್ರಮಾನವರಾಗುತ್ತಿರುವುದು ಖೇದಕರ ಎಂದರು. ಹಾಗೆಯೇ ಪ್ರತಿವರ್ಷ ನೈತಿಕ ಮೌಲ್ಯಗಳ ಲಕ್ಷಾಂತರ ಪುಸ್ತಕಗಳನ್ನು ಪ್ರಕಟಿಸಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸೇವೆಯನ್ನು ಶ್ಲಾಘಿಸಿದರು.

ಅಂಚೆ-ಕುಂಚ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ವಿತರಿಸಿ ಮಾತನಾಡಿದ ಚಲನಚಿತ್ರ ನಟ ಅಭಿಜಿತ್, ಪುಸ್ತಕಗಳನ್ನು ಓದಿ ವಿದ್ಯೆ ಮತ್ತು ಬುದ್ಧಿಯನ್ನು ಬೆಳೆಸಿಕೊಂಡಾಗ ವಿವೇಕವುಳ್ಳ ಆದರ್ಶ ವ್ಯಕ್ತಿಗಳಾಗಲು ಸಾಧ್ಯ. ಮನಸ್ಸಿನ ನಿಯಂತ್ರಣದೊಂದಿಗೆ ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಸ್ವೀಕರಿಸಿ ಕೆಟ್ಟದ್ದನ್ನು ಕಡೆಗಣಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಶಿಕ್ಷಣದ ಮೂಲಕ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ, ಚಿತ್ರಕಲೆ, ಪ್ರಕೃತಿ-ಪರಿಸರ ವೀಕ್ಷಣೆಯಂತಹ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಜಗನ್ನಾಥ್ ಮತ್ತು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಉಪಸ್ಥಿತರಿದ್ದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಶೇಖರ್ ಕಡ್ತಲ ಧನ್ಯವಾದ ಅರ್ಪಿಸಿದರು ಹಾಗೂ ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ