image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡದ ಹೊಸ ಆವಿಷ್ಕಾರಕರಿಗೆ ಸಂಸದ ಚೌಟ ಅಭಿನಂದನೆ

ದಕ್ಷಿಣ ಕನ್ನಡದ ಹೊಸ ಆವಿಷ್ಕಾರಕರಿಗೆ ಸಂಸದ ಚೌಟ ಅಭಿನಂದನೆ

ನವದೆಹಲಿ : ನೀತಿ ಆಯೋಗದ ’ಅಟಲ್ ಇನ್ನೋವೇಶನ್ ಮಿಷನ್’ (AIM) ಅಡಿಯಲ್ಲಿ ‘ಗ್ರಾಸ್ರೂಟ್ ಇನ್ನೋವೇಟರ್ ರೆಕಗ್ನಿಷನ್ 2026’ ಗೌರವಕ್ಕೆ ಭಾಜನರಾದ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ನವೋದ್ಯಮಿಗಳನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಅಭಿನಂದಿಸಿದರು. ಎಕ್ಸ್‌ಪರಿಮೈಂಡ್ ಲ್ಯಾಬ್ಸ್ ಪ್ರೈ. ಲಿ. ನ ಅಕ್ಷಯ್ ಮಾಶೇಲ್ಕರ್, ಮಾವೇದಾಸ್ ಫುಡ್ಸ್ ಆಂಡ್ ಸಿರಿಯಲ್ಸ್ ಪ್ರೈ. ಲಿ. ನ ಅನುಷಾ ಪ್ರಜ್ವಲ್ ಹಾಗೂ ಡಬ್ಲ್ಯೂ.ಡಬ್ಲ್ಯೂ.ಆರ್. ಇನ್ನೋವೇಶನ್ಸ್ ಪ್ರೈ. ಲಿ. ನ ರತ್ನಾಕರ ನಾಯಕ್ ಅವರು ಈ ರಾಷ್ಟ್ರೀಯ ಗೌರವಕ್ಕೆ ಪಾತ್ರರಾದ ಜಿಲ್ಲೆಯ ಸಾಧಕರಾಗಿದ್ದಾರೆ. ದೇಶಾದ್ಯಂತ ಆಯ್ಕೆಯಾದ 26 ನವೋದ್ಯಮಿಗಳ ಪೈಕಿ ದಕ್ಷಿಣ ಕನ್ನಡಕ್ಕೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದ ಈ ಮೂವರು ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕರ ಸಾಧನೆಯನ್ನು ಸಂಸದರು ಶ್ಲಾಘಿಸಿದ್ದು, ಸ್ಥಳೀಯ ಸಂಶೋಧನೆಗಳ ಮೂಲಕ ಗುರುತಿಸಿಕೊಂಡ ಈ ಯುವಶಕ್ತಿಗಳೇ ನಮ್ಮ ಜಿಲ್ಲೆಯ ‘ಬೊಲ್ಪು’ ಎಂದು ಹರ್ಷ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿದ ಮೂವರೂ ಇನ್ನೋವೇಟರ್‌ಗಳು ತಮ್ಮ ಆವಿಷ್ಕಾರದ ಪಯಣವನ್ನು ಹಂಚಿಕೊಂಡರಲ್ಲದೆ, ತಮ್ಮ ತಂತ್ರಜ್ಞಾನ ಹಾಗೂ ಹೊಸ ಆಲೋಚನೆಗಳು ಗ್ರಾಮೀಣ ಮತ್ತು ತಳಮಟ್ಟದಲ್ಲಿ ಹೇಗೆ ಸಕಾರಾತ್ಮಕ ಬದಲಾವಣೆ ತರುತ್ತಿವೆ ಎಂಬುದನ್ನು ವಿವರಿಸಿದರು. ನೈಜ ಜಗತ್ತಿನ ಸವಾಲುಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಸಮಾಜಮುಖಿ ಯೋಜನೆಗಳಿಗೆ ಪ್ರೋತ್ಸಾಹ ನೀಡಿದ ಚೌಟ ಅವರು, ಕರಾವಳಿ ಭಾಗದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಸ್ಥಳೀಯ ಸಂಶೋಧನೆಗಳು ಮತ್ತು ಸ್ವಾವಲಂಬನೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ 2047' ಗುರಿಯನ್ನು ತಲುಪಲು ಮುಖ್ಯ ಅಡಿಪಾಯವಾಗಿದೆ ಎಂದು ತಿಳಿಸಿದ ಸಂಸದರು, ತಂತ್ರಜ್ಞಾನ, ಕೃಷಿ ಮತ್ತು ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ದೇಶವನ್ನು ಆರ್ಥಿಕವಾಗಿ ಬಲಪಡಿಸುತ್ತಿವೆ ಎಂದರು. ಸ್ಥಳೀಯ ಸವಾಲುಗಳಿಗೆ ಜಾಗತಿಕ ಮಟ್ಟದ ಪರಿಹಾರ ಕಂಡುಕೊಳ್ಳುವ ಕರಾವಳಿಯ ಪ್ರತಿಭೆಗಳಿಗೆ ಬೇಕಾದ ಅಗತ್ಯ ಪ್ರೋತ್ಸಾಹ ನೀಡಲು ತಾವು ಸದಾ ಬದ್ಧವಾಗಿರುವುದಾಗಿ ಕ್ಯಾ. ಬ್ರಿಜೇಶ್ ಚೌಟ ಪುನರುಚ್ಚರಿಸಿದರು.

Category
ಕರಾವಳಿ ತರಂಗಿಣಿ