ಮಂಗಳೂರು : ಮಂಗಳೂರು ಧರ್ಮಕ್ಷೇತ್ರದ 2026-2028 ನೇ ಸಾಲಿನ ಪಾಲನಾ ಪರಿಷತ್ತಿನ ನೂತನ ಕಾರ್ಯದರ್ಶಿಯಾಗಿ ಸಿಟಿ ವಲಯದ ನೀರುಮಾರ್ಗ ಚರ್ಚ್‌ನ ಝೀಟಾ ಉಷಾ ಫೆರ್ನಾಂಡಿಸ್ ಅವರು ಆಯ್ಕೆಯಾಗಿದ್ದಾರೆ. ಜುಲೈ 30ರಂದು ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ಧರ್ಮಕ್ಷೇತ್ರದ ಪಾಲನಾ ಪರಿಷತ್ತಿನ ನೂತನ ಸಮಿತಿಯ ಚುನಾವಣೆ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಹೊಸ ತ್ರೈವಾರ್ಷಿಕ ಅವಧಿಯ ಧ್ಯೇಯ ಹಾಗೂ ದೃಷ್ಟಿಕೋನವನ್ನು ಮಂಡಿಸಿ, ನೂತನ ಪರಿಷತ್ ಸದಸ್ಯರನ್ನು ಪರಿಚಯಿಸಿದರು.
ಧರ್ಮಕ್ಷೇತ್ರದ ಶ್ರೇಷ್ಠ ಗುರು ವಂದನೀಯ ಫಾ. ಮ್ಯಾಕ್ಸಿಮ್ ಎಲ್. ನೊರೊನ್ಹಾ ಅವರು ಕಳೆದ ಅವಧಿಯ ಕಾರ್ಯಚಟುವಟಿಕೆಗಳ ವರದಿ ಹಾಗೂ ಮುಂದಿನ ಪಾಸ್ಟೋರಲ್ ಯೋಜನೆಗಳನ್ನು ಸಭೆಯ ಮುಂದಿಟ್ಟರು. ತದನಂತರ 2026-2028ನೇ ಸಾಲಿನ ವಿವಿಧ ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ಜರುಗಿತು. ಚುನಾವಣೆಯಲ್ಲಿ ಝೀಟಾ ಉಷಾ ಫೆರ್ನಾಂಡಿಸ್ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಪುರುಷ ಪ್ರತಿನಿಧಿಯಾಗಿ ಕೆಲರಾಯಿ ಚರ್ಚ್‌ನ ಸಂತೋಷ್ ಡಿ ಕೋಸ್ತಾ ಹಾಗೂ ಮಹಿಳಾ ಪ್ರತಿನಿಧಿಯಾಗಿ ಬಳಕುಂಜೆ ಚರ್ಚ್‌ನ ಡಾ. ಫ್ರೀಡಾ ಫ್ಲಾವಿಯಾ ಡಿ ಸೋಜಾ ಆಯ್ಕೆಯಾದರು. ಕ್ಯಾಥೊಲಿಕ್ ಕೌನ್ಸಿಲ್ ಆಫ್ ಇಂಡಿಯಾ (CCI) ಪ್ರತಿನಿಧಿಗಳಾಗಿ ಸಂತೋಷ್ ಡಿ ಸೋಜಾ ಮತ್ತು ಲಿನೆಟ್ ಫೆರ್ನಾಂಡಿಸ್ ಹಾಗೂ ಕ್ಯಾಥೊಲಿಕ್ ಕೌನ್ಸಿಲ್ ಆಫ್ ಕರ್ನಾಟಕ (CCK) ಪ್ರತಿನಿಧಿಗಳಾಗಿ ಪಾನೀರ್‌ನ ಆಲ್ವಿನ್ ಜೆರೊಮ್ ಡಿ ಸೋಜಾ ಮತ್ತು ಕುಲಶೇಖರದ ಡೆನಿಸ್ ಡಿಸಿಲ್ವಾ ಅವರು ಚುನಾಯಿತರಾದರು.
ಚುನಾವಣಾ ಪ್ರಕ್ರಿಯೆಯ ಬಳಿಕ ಸಿಬಿಸಿಐ ಲಿಟರ್ಜಿ ಆಯೋಗದ ಪ್ರತಿನಿಧಿ ವಂದನೀಯ ಡಾ. ರುಡಾಲ್ಫ್ ರಾಜ್ ಪಿಂಟೊ ಅವರು "2026-2028ರ ಸಿನೋಡ್ ಅನುಷ್ಠಾನದ ಮಾರ್ಗಸೂಚಿಗಳು" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನೂತನ ಕಾರ್ಯದರ್ಶಿ ಹಾಗೂ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದರು.