image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾದಕ ವಸ್ತುಗಳ ವಿರುದ್ಧ ‘ಝೀರೋ ಟಾಲರೆನ್ಸ್’ ನೀತಿ: ಸಚಿವ ಯು.ಟಿ. ಖಾದರ್

ಮಾದಕ ವಸ್ತುಗಳ ವಿರುದ್ಧ ‘ಝೀರೋ ಟಾಲರೆನ್ಸ್’ ನೀತಿ: ಸಚಿವ ಯು.ಟಿ. ಖಾದರ್

ಮಂಗಳೂರು : ರಾಜ್ಯದಲ್ಲಿ ಸರಕಾರವು ಮಾದಕವಸ್ತುಗಳ ವಿಚಾರದಲ್ಲಿ 'ಝೀರೋ ಟಾಲರೆನ್ಸ್' (ಶೂನ್ಯ ಸಹಿಷ್ಣುತೆ) ನೀತಿ ತಳೆದಿದ್ದು, ಕಠಿಣ ಕಾನೂನು ತಿದ್ದುಪಡಿಗೆ ಚಿಂತನೆ ನಡೆಸಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಕರ್ನಾಟಕ ಸರಕಾರವು ಮಾದಕ ವಸ್ತುಗಳ ವಿರುದ್ಧ ಕೈಗೊಂಡಿರುವ ರಾಜ್ಯವ್ಯಾಪಿ ಜಾಗೃತಿ ಅಭಿಯಾನದ ಅಂಗವಾಗಿ ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಪೊಲೀಸ್ ವತಿಯಿಂದ ನಡೆದ "ಆಪರೇಷನ್ ರೈಸ್ ಆಂಡ್ ಬೇಡ ಬ್ರೋ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾವು ಹಿಂದೆ ಆರೋಗ್ಯ ಸಚಿವರಾಗಿದ್ದಾಗ ತಂಬಾಕು ಮುಕ್ತ ಸಮಾಜಕ್ಕಾಗಿ ಗುಟ್ಕಾ, ಹುಕ್ಕಾ ಬಾರ್ ಹಾಗೂ ಈ-ಸಿಗರೇಟ್ ನಿಷೇಧಿಸಿದ್ದನ್ನು ಸ್ಮರಿಸಿದ ಅವರು, ಎಲ್ಲ ದುಷ್ಟಟಗಳಿಗೆ ತಂಬಾಕೇ ಮೂಲವಾಗಿದ್ದು, ವಿದ್ಯಾರ್ಥಿಗಳು ಇದರಿಂದ ಸಂಪೂರ್ಣ ದೂರವಿರಬೇಕು ಎಂದರು. ಸಿನಿಮಾಗಳಲ್ಲಿ ಹೀರೋಗಳು ಸಿಗರೇಟ್ ಸೇದುವುದನ್ನು ನೋಡಿ ಯುವಜನತೆ ದಾರಿ ತಪ್ಪಬಾರದು. ನೈಜ ಬದುಕಿನಲ್ಲಿ ದುಷ್ಟಟಗಳಿಂದ ಯಾರೂ ದೊಡ್ಡ ಮನುಷ್ಯರಾಗುವುದಿಲ್ಲ, ಬದಲಾಗಿ ನಾಶವಾಗುತ್ತಾರೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ದುಷ್ಟಟಮುಕ್ತ ಹಾಗೂ ದ್ವೇಷಮುಕ್ತ ಭಾರತದ ರಾಯಭಾರಿಯಾಗಬೇಕು ಎಂದು ಕರೆ ನೀಡಿದರು.

ಮಂಗಳೂರು ನಗರ ಹಾಗೂ ದ.ಕ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ತಡೆ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಇರಿಸಿದ ದಿಟ್ಟ ಹೆಜ್ಜೆಯನ್ನು ಅವರು ಶ್ಲಾಘಿಸಿದರು. ದ.ಕ. ಜಿಲ್ಲೆಯು ಗಡಿ ಪ್ರದೇಶ ಹೊಂದಿರುವುದರಿಂದ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ತಡೆಯಲು ಗಡಿ ಜಿಲ್ಲೆಯಾದ ಕಾಸರಗೋಡು ಪೊಲೀಸ್ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗುವುದು ಎಂದರು.

ಭಾರತವು ವಿಶ್ವದಲ್ಲೇ ಪ್ರಥಮ ಸ್ಥಾನಕ್ಕೇರಲು ಶಕ್ತಿಶಾಲಿ ಯುವ ಸಮುದಾಯ ಅಗತ್ಯವಿದೆ. ಮಾದಕದ್ರವ್ಯಕ್ಕೆ ದಾಸರಾಗುವುದು ದೇಶದ ಪ್ರಗತಿಯನ್ನು ಕುಂಠಿತಗೊಳಿಸುವ ಪರೋಕ್ಷ ಯತ್ನವಾಗಿದೆ. ಕೇವಲ ಅಂಕಗಳಷ್ಟೇ ಮುಖ್ಯವಲ್ಲ, ವ್ಯಕ್ತಿತ್ವ ವಿಕಸನವೂ ಅತ್ಯಂತ ಪ್ರಮುಖ ಎಂದರು. ಮಾದಕದ್ರವ್ಯ ಜಾಲದ ಬಗ್ಗೆ ಪೊಲೀಸರು ನೀಡಿರುವ ಕ್ಯೂಆರ್ (QR) ಸ್ಕ್ಯಾನರ್ ಮುಖಾಂತರ ವಿದ್ಯಾರ್ಥಿಗಳು ರಹಸ್ಯವಾಗಿ ಮಾಹಿತಿ ನೀಡಬೇಕು ಹಾಗೂ ದಾರಿ ತಪ್ಪಿದ ಯುವಕರನ್ನು ಸರಿದಾರಿಗೆ ತರುವುದು ಎಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಹೆತ್ತವರು ತಮ್ಮ ಮಕ್ಕಳು ಚಟಕ್ಕೆ ಬೀಳದಂತೆ ಎಚ್ಚರವಹಿಸಬೇಕು ಮತ್ತು ಮಾದಕ ವಸ್ತು ಸೇವಿಸಿದ ಮಕ್ಕಳನ್ನು ವಶಕ್ಕೆ ಪಡೆದ ಪೊಲೀಸರನ್ನು ದೂರುವ ಪ್ರವೃತ್ತಿ ಸರಿಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಅಭಿಯಾನಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಶಾಸಕ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಜಿಲ್ಲಾ ಪಂಚಾಯತ್ ಸಿಇಒ ನರವಾಡೆ ವಿನಾಯಕ ಕಾರಭಾರಿ, ಮಂಗಳೂರು ನಗರ ಡಿಸಿಪಿಗಳಾದ ಮಿಥುನ್ ಎಚ್.ಎನ್., ಕೆ. ರವಿಶಂಕರ್ ಮತ್ತು ಉಮೇಶ್ ಪಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಹಾಗೂ ಎಸಿಪಿಗಳಾದ ಗೀತಾ ಡಿ. ಕುಲಕರ್ಣಿ, ನಜ್ಮಾ ಫಾರೂಕಿ, ವಿಜಯಕ್ರಾಂತಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ