ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳವು ಆಗಸ್ಟ್ 7 ಮತ್ತು 8, 2026ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದ್ದು, ಗ್ರಾಮೀಣ ಹಾಗೂ ಅವಕಾಶವಂಚಿತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಮಾಜಮುಖಿ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಹಾಗೂ ಕಂಪನಿಗಳಿಗೆ ಪ್ರವೇಶ ಉಚಿತವಾಗಿದೆ. ಇಲ್ಲಿಯವರೆಗೆ ಆಳ್ವಾಸ್ ಆಯೋಜಿಸಿದ 23 ಉದ್ಯೋಗ ಮೇಳಗಳಲ್ಲಿ 40,848 ಅಭ್ಯರ್ಥಿಗಳು ಸ್ಥಳದಲ್ಲೇ ಉದ್ಯೋಗ ಪಡೆದುಕೊಂಡಿದ್ದು, 66,432 ಅಭ್ಯರ್ಥಿಗಳು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಪಡೆದಿದ್ದಾರೆ ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶ್ರೀ ವಿವೇಕ ಆಳ್ವ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು,
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ 350ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, 24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಸುಗಮಗೊಳಿಸಲು https://alvaspragati.com/candidate-registration ವೆಬ್‌ಸೈಟ್ ಮೂಲಕ ಆನ್‌ಲೈನ್ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಬಂಟ್ವಾಳ, ಪುತ್ತೂರು, ಕುಂದಾಪುರ, ಸುಬ್ರಹ್ಮಣ್ಯ, ಮೂಡುಬಿದಿರೆ, ಮಂಗಳೂರು, ಕಾಪು ಮತ್ತು ಉಡುಪಿಯಲ್ಲಿ ಪ್ರೀ-ಓರಿಯಂಟೇಷನ್ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಜೊತೆಗೆ, ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅರ್ಹತೆಗೆ ಸೂಕ್ತವಾದ ಕಂಪನಿಗಳನ್ನು ಶಿಫಾರಸು ಮಾಡಲು ವಿಶೇಷ ಎಐ (AI) ಆಧಾರಿತ ಚಾಟ್‌ಬಾಟ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. 2026ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿದವರು, ಹಿಂದಿನ ವರ್ಷಗಳ ಪದವೀಧರರು ಹಾಗೂ ಅನುಭವಿಗಳು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ವಲಯವಾರು ವಿಶೇಷತೆಗಳ ಪೈಕಿ ಉತ್ಪಾದನಾ (Manufacturing) ವಲಯದಲ್ಲಿ 74 ಕಂಪನಿಗಳಿಂದ 5,877 ಉದ್ಯೋಗಾವಕಾಶಗಳಿವೆ. ಇದರಲ್ಲಿ ಟೊಯೋಟಾ ಕಿರ್ಲೋಸ್ಕರ್, ಟಿವಿಎಸ್ ಮೋಟರ್, ಸನ್ಸೆರಾ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಭಾಗವಹಿಸುತ್ತಿದ್ದು, ಐಟಿಐ ಅಭ್ಯರ್ಥಿಗಳಿಗೆ 1,806 ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ 2,400 ಹುದ್ದೆಗಳು ಲಭ್ಯವಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಂಸ್ಥೆಯು ಕೋಲಾರದಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ಅಭಿಯಾನ ನಡೆಸುತ್ತಿದೆ. ಮೆಕ್ಯಾನಿಕಲ್, ಇಇಇ, ಇಸಿಇ, ಬಿಸಿಎ, ಬಿಸ್ಸಿ, ಬಿಕಾಂ, ಎಂಕಾಮ್ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಭ್ಯರ್ಥಿಗಳಿಗೂ ವ್ಯಾಪಕ ಅವಕಾಶಗಳಿವೆ.
ಐಟಿ/ಐಟಿಇಎಸ್ ವಲಯದಲ್ಲಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಕೋಡ್‌ಕ್ರಾಫ್ಟ್ ಸೇರಿದಂತೆ 40ಕ್ಕೂ ಹೆಚ್ಚು ಕಂಪನಿಗಳಿಂದ 200ಕ್ಕೂ ಹೆಚ್ಚು ಕೋರ್ ಐಟಿ ಮತ್ತು 3,500ಕ್ಕೂ ಹೆಚ್ಚು ನಾನ್-ಐಟಿ ಉದ್ಯೋಗಾವಕಾಶಗಳಿವೆ. ಪೈಥಾನ್, ಫ್ಲಟರ್, ಎಐ ಡೆವಲಪರ್ ಹಾಗೂ ಸೀನಿಯರ್ ಎಕ್ಸಿಕ್ಯೂಟಿವ್, ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಬ್ಯಾಂಕಿಂಗ್ ಹಾಗೂ ಹಣಕಾಸು ವಲಯದಲ್ಲಿ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಎನ್‌ಆರ್‌ಯುಡಿ, ಉಜ್ಜೀವನ್, ಮಹೀಂದ್ರಾ ಫೈನಾನ್ಸ್ ಸೇರಿದಂತೆ 30 ಪ್ರಮುಖ ಸಂಸ್ಥೆಗಳಿಂದ 2,450 ಉದ್ಯೋಗಾವಕಾಶಗಳಿದ್ದು, ಮಹೀಂದ್ರಾ ಫೈನಾನ್ಸ್ ಏರಿಯಾ ಬಿಸಿನೆಸ್ ಮ್ಯಾನೇಜರ್ ಹುದ್ದೆಗೆ ಆಕರ್ಷಕ ವಾರ್ಷಿಕ ರೂ. 8 ಲಕ್ಷದವರೆಗೆ ವೇತನ ನೀಡುತ್ತಿದೆ.
ಆರೋಗ್ಯ ವಲಯದಲ್ಲಿ ವೋಕಾರ್ಟ್, ಅಪೋಲೊ, ವೈದೇಹಿ ಹಾಗೂ ಸಕ್ರಾ ವರ್ಲ್ಡ್ ಆಸ್ಪತ್ರೆ ಸೇರಿದಂತೆ 25 ಪ್ರಮುಖ ಆಸ್ಪತ್ರೆಗಳಿಂದ 1,700ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿದ್ದು, 750ಕ್ಕೂ ಹೆಚ್ಚು ನರ್ಸ್ ಹುದ್ದೆಗಳಿವೆ. ನಿರ್ಮಾಣ (Construction) ವಲಯದಲ್ಲಿ ರಾಮ್ಕೋ ಸಿಮೆಂಟ್ಸ್, ಶೋಭಾ, ರೋಹನ್ ಕಾರ್ಪೊರೇಷನ್ ಸೇರಿದಂತೆ 13 ಕಂಪನಿಗಳು ಭಾಗವಹಿಸುತ್ತಿವೆ. ಚಿಲ್ಲರೆ ವ್ಯಾಪಾರ ಮತ್ತು ಮಾರಾಟ (Retail & Sales) ವಲಯದಲ್ಲಿ ಬಿಗ್‌ಬಾಸ್ಕೆಟ್, ಬ್ಲಿಂಕಿಟ್, ಲುಲು ಮಾಲ್ ಸೇರಿದಂತೆ 67 ಸಂಸ್ಥೆಗಳು 4,500ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ಎಕ್ಸ್‌ಪರ್ಟೀಸ್ ಸಂಸ್ಥೆಯು ಡಿಪ್ಲೊಮಾ ಮತ್ತು ಐಟಿಐ ಅಭ್ಯರ್ಥಿಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಅವಕಾಶ ಒದಗಿಸುತ್ತಿದ್ದು, ಎಂಬಿಎ ಹಾಗೂ ಎಂಎಚ್‌ಆರ್‌ಡಿ ಅಭ್ಯರ್ಥಿಗಳಿಗೆ 70ಕ್ಕೂ ಹೆಚ್ಚು ಹೆಚ್‌ಆರ್ ಹುದ್ದೆಗಳು ಲಭ್ಯವಿವೆ.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ 'ಆಳ್ವಾಸ್ ಪ್ರಗತಿ–2026' ಬೃಹತ್ ಉದ್ಯೋಗ ಮೇಳದಲ್ಲಿ ವಿವಿಧ ವಲಯಗಳ ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಅಭ್ಯರ್ಥಿಗಳಿಗೆ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿವೆ. SSLC, PUC, ITI, ಡಿಪ್ಲೊಮಾ, B.Com, BBA, BBM, BCA, BA, B.Sc., MBA, M.Com ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಮೇಳದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ರಿಟೇಲ್ ಅಸೋಸಿಯೇಟ್, ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್, ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ಕ್ಯಾಶಿಯರ್, ಸ್ಟೋರ್ ಮ್ಯಾನೇಜರ್, ಟೀಮ್ ಲೀಡರ್, ವೇರ್‌ಹೌಸ್ ಅಸೋಸಿಯೇಟ್ ಹಾಗೂ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಸೇರಿದಂತೆ ವೈವಿಧ್ಯಮಯ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ವಾರ್ಷಿಕ 3 ಲಕ್ಷದಿಂದ 16 ಲಕ್ಷ ರೂಪಾಯಿಗಳವರೆಗಿನ ಆಕರ್ಷಕ ವೇತನ ಪ್ಯಾಕೇಜ್ ಲಭ್ಯವಿದೆ. ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಉಡುಪಿ, ಶಿವಮೊಗ್ಗ ಹಾಗೂ ಬೆಳಗಾವಿ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸಲು ಈ ಅವಕಾಶ ಕಲ್ಪಿಸಲಾಗಿದೆ.
ವಿವಿಧ ವಲಯಗಳ ವಿವರ ನೋಡುವುದಾದರೆ, ಶಿಕ್ಷಣ ಮತ್ತು ಸ್ವಯಂಸೇವಾ ಸಂಸ್ಥೆಗಳ (Education & NGO) ವಲಯದಲ್ಲಿ 11 ಪ್ರಮುಖ ಸಂಸ್ಥೆಗಳು ಭಾಗವಹಿಸುತ್ತಿದ್ದು, ಒಟ್ಟು 1,332 ಉದ್ಯೋಗಾವಕಾಶಗಳಿವೆ. ಇದರಲ್ಲಿ ಗೋವನ್ ಇನ್‌ಸ್ಟಿಟ್ಯೂಟ್ ಇಂಟರ್‌ನ್ಯಾಷನಲ್, ಆಪ್ಸ್ ಎನ್ ದಿವೈಸಸ್, ಗ್ರೋ (ಡಾ. ರೆಡ್ಡೀಸ್ ಫೌಂಡೇಶನ್), ಕ್ರೈಸ್ ಕಾರ್ಪ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಲಿವೆ. ಇದರಲ್ಲಿ BA, B.Com., B.Sc., BSW, BBA, BHRD, BHM ಹಾಗೂ BHS ಪದವೀಧರರಿಗೆ 412 ಹುದ್ದೆಗಳು, MA, MBA, MSW, M.Com. ಹಾಗೂ M.Sc. ಪದವೀಧರರಿಗೆ 40 ಹುದ್ದೆಗಳು ಮತ್ತು BCA/MCA ಹಾಗೂ B.Sc. (ಕಂಪ್ಯೂಟರ್ ಸೈನ್ಸ್) ಅಭ್ಯರ್ಥಿಗಳಿಗೆ ತಲಾ 20 ಉದ್ಯೋಗಾವಕಾಶಗಳು ಲಭ್ಯವಿದೆ.
ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಬ್ಲಾಕ್‌ಫ್ರಾಗ್ ಟೆಕ್ನಾಲಜೀಸ್, ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಲಿಮಿಟೆಡ್, ಅನೈಯ ಟೆಕ್ನಾಲಜೀಸ್, ಬ್ರೈವರಾ ಟೆಕ್ನಾಲಜೀಸ್ ಹಾಗೂ ಎಲೆಕ್ಟ್ರಾನ್ ಟೆಕ್ನಾಲಜೀಸ್ ಸೇರಿದಂತೆ 8 ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, 119ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುತ್ತಿವೆ. ಈ ವಲಯದಲ್ಲಿ ವಾರ್ಷಿಕ ₹1.5 ಲಕ್ಷದಿಂದ ₹5 ಲಕ್ಷದವರೆಗೆ ವೇತನ ಲಭ್ಯವಿದ್ದು, ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಸಂಸ್ಥೆಯು ECE ಹಾಗೂ E&E ವಿಭಾಗದ B.E./B.Tech. ಪದವೀಧರರಿಗೆ ₹3 ರಿಂದ 4 ಲಕ್ಷ ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ₹2.1 ರಿಂದ 2.4 ಲಕ್ಷ ವಾರ್ಷಿಕ ವೇತನದೊಂದಿಗೆ ಹುದ್ದೆಗಳನ್ನು ಒದಗಿಸುತ್ತಿದೆ.
ಆತಿಥ್ಯ (Hospitality) ವಲಯದಲ್ಲಿ ಲೆಮನ್ ಟ್ರೀ ಹೋಟೆಲ್ಸ್, ಗೋಕುಲಂ ಗ್ರೂಪ್ ಆಫ್ ಹೋಟೆಲ್ಸ್, ಪೆನಿಸ್ಸುಲಾ ಡೆಲಾರ್, ದಿ ಕ್ಯಾಪಿಟಲ್, ಸ್ಕಿಲ್ಲಾ ರೆಸಾರ್ಟ್ಸ್ & ಹೋಟೆಲ್ಸ್, ಪಿವಿಆರ್ ಇನಾಕ್ಸ್, ತಾಜ್ ಸ್ಯಾಟ್ಸ್ ಏರ್ ಕ್ಯಾಟರಿಂಗ್ ಲಿಮಿಟೆಡ್, ದಿ ತಮಾರ ಕೂರ್ಗ್, ಗೋಲ್ಡ್‌ಫಿಂಚ್ ಹೋಟೆಲ್ಸ್ ಹಾಗೂ ದಿ ಓಷನ್ ಪರ್ಲ್ ಸೇರಿದಂತೆ 19 ಪ್ರಮುಖ ಹೋಟೆಲ್ ಸಂಸ್ಥೆಗಳು ಪಾಲ್ಗೊಳ್ಳುತ್ತಿದ್ದು, 285ಕ್ಕೂ ಹೆಚ್ಚು ಅವಕಾಶಗಳಿವೆ. ಹೋಟೆಲ್ ಮ್ಯಾನೇಜ್‌ಮೆಂಟ್, ಸಿವಿಲ್ ಎಂಜಿನಿಯರಿಂಗ್, ಡಿಪ್ಲೊಮಾ, ITI, ಪದವಿ, BBA, B.Com., MBA, M.Com., SSLC ಹಾಗೂ PUC ವಿದ್ಯಾರ್ಹತೆ ಉಳ್ಳವರಿಗೆ ಇಲ್ಲಿ ಅವಕಾಶ ನೀಡಲಾಗುತ್ತಿದೆ.
ಮಾಧ್ಯಮ (Media) ವಲಯದಲ್ಲಿ ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ, ದಿ ಟೈಮ್ಸ್ ಆಫ್ ಇಂಡಿಯಾ-ವಿಜಯ ಕರ್ನಾಟಕ, ಉದಯವಾಣಿ-ತರಂಗ, ವಾರ್ತಾಭಾರತಿ, ಪವರ್ ಟಿವಿ ಹಾಗೂ ಹೊಸದಿಗಂತ ಸೇರಿದಂತೆ 12 ಸಂಸ್ಥೆಗಳು ಭಾಗವಹಿಸುತ್ತಿದ್ದು, ರಾಜ್ಯಾದ್ಯಂತ 145ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿವೆ. ಪತ್ರಕರ್ತರು, ವರದಿಗಾರರು, ವೀಡಿಯೋ ಸಂಪಾದಕರು, ಕಂಟೆಂಟ್ ಡೆವಲಪರ್‌ಗಳು, ಗ್ರಾಫಿಕ್ ಡಿಸೈನರ್‌ಗಳು, ಕಾಪಿ ಎಡಿಟರ್‌ಗಳು, ಹೆಚ್‌ಆರ್ ಅಧಿಕಾರಿಗಳು, ಸಾಮಾಜಿಕ ಜಾಲತಾಣ ನಿರ್ವಾಹಕರು, ಛಾಯಾಗ್ರಾಹಕರು, ಜಾಹೀರಾತು ಮತ್ತು ಮುದ್ರಣ ವೃತ್ತಿಪರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಔಷಧ ತಯಾರಿಕಾ (Pharmaceutical) ವಲಯದಲ್ಲಿ ಯೂರೋಫಿನ್ಸ್ (ಬೆಂಗಳೂರು), ಆರ್.ಎಲ್. ಫೈನ್ ಕೆಮ್, ಸಾಮಿ ನ್ಯೂಟ್ರಾಸುಟಿಕಲ್ಸ್, ಗ್ರೂಪ್ ಫಾರ್ಮಾ, ಸೋಲಾರಾ ಆಕ್ಟಿವ್ ಫಾರ್ಮಾ, ಮೆಡಾರ್ಗಾನಿಕ್ಸ್ ಇಂಡಿಯಾ ಹಾಗೂ ವಸುಧಾ ಲೈಫ್ ಸೈನ್ಸಸ್ ಸೇರಿದಂತೆ 7 ಕಂಪನಿಗಳು 220ಕ್ಕೂ ಹೆಚ್ಚು ಹುದ್ದೆಗಳನ್ನು ಒದಗಿಸುತ್ತಿವೆ. M.Sc. (ರಸಾಯನಶಾಸ್ತ್ರ) ಮತ್ತು M.Pharm. ಅಭ್ಯರ್ಥಿಗಳಿಗೆ 120ಕ್ಕೂ ಹೆಚ್ಚು, B.Sc. ಅಭ್ಯರ್ಥಿಗಳಿಗೆ 60ಕ್ಕೂ ಹೆಚ್ಚು ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ 50ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿವೆ. Ph.D. (ರಸಾಯನಶಾಸ್ತ್ರ) ಅಭ್ಯರ್ಥಿಗಳಿಗೆ ರಿಸರ್ಚ್ ಸೈಂಟಿಸ್ಟ್ ಹುದ್ದೆಗಳಿಗೆ ₹6 ರಿಂದ 8 ಲಕ್ಷ ಹಾಗೂ ಇತರೆ ಹುದ್ದೆಗಳಿಗೆ ₹4 ಲಕ್ಷದವರೆಗೆ ವಾರ್ಷಿಕ ವೇತನ ನೀಡಲಾಗುತ್ತಿದೆ.
ದೂರಸಂಪರ್ಕ (Telecom) ವಲಯದಲ್ಲಿ ಏರ್‌ಟೆಲ್, ಜಿಯೋ, ಡೋಸಾಫ್ಟ್ ಟೆಕ್ನಾಲಜೀಸ್, ಡೀನೆಟ್ ಹಾಗೂ ನಾರ್ತ್‌ಈಸ್ಟ್ ನೆಟ್‌ವರ್ಕ್ ಸೇರಿದಂತೆ 6 ಪ್ರಮುಖ ಕಂಪನಿಗಳು ಪಾಲ್ಗೊಳ್ಳುತ್ತಿವೆ. ವೈದ್ಯಕೀಯ, ಪ್ಯಾರಾಮೆಡಿಕಲ್, ಎಂಜಿನಿಯರಿಂಗ್, ಕಲಾ ವಿಭಾಗ, ಕಾಮರ್ಸ್, ಮ್ಯಾನೇಜ್‌ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ITI, ಡಿಪ್ಲೊಮಾ ಪದವಿ ಮತ್ತು ಸ್ನಾತಕೋತ್ತರ ಅಭ್ಯರ್ಥಿಗಳಲ್ಲದೆ SSLC, PUC ಹಾಗೂ ಇತರೆ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಥವಾ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಆಗಸ್ಟ್ 6ರಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ www.alvaspragati.com ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9611750531, 9741440490, 9008907716 ಅಥವಾ 7975223865 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶ್ರೀ ಪ್ರಸಾದ್ ಶೆಟ್ಟಿ ಹಾಗೂ ಪ್ಲೇಸ್‌ಮೆಂಟ್ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.