ಚಿಕ್ಕಮಗಳೂರು : ಪ್ರತಿಪಕ್ಷದಲ್ಲಿದ್ದಾಗ "ನಮ್ಮ ನೀರು ನಮ್ಮ ಹಕ್ಕು" ಎಂದು ಪಾದಯಾತ್ರೆ ಹಾಗೂ ಚಳುವಳಿ ಮಾಡಿದವರು ಈಗ ಅಧಿಕಾರಕ್ಕೆ ಬಂದಿದ್ದರೂ ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾವೇರಿ ನದಿ ನೀರಿನ ಮಧ್ಯಂತರ ಆದೇಶದಂತೆ ಪ್ರತಿದಿನ 3,500 ಕ್ಯೂಸೆಕ್‌ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ ಎಂದು ಹೇಳಿದರು. ಬಚಾವತ್ ತೀರ್ಪಿನ ಪ್ರಕಾರ ಕೊಪ್ಪಳ ಜಿಲ್ಲೆಯ ಎಡದಂಡೆ ಮತ್ತು ಬಲದಂಡೆಗೆ ವರ್ಷದ 11 ತಿಂಗಳು 5 ಟಿಎಂಸಿ ನೀರು ನೀಡಬೇಕೆಂಬ ಆದೇಶವಿದ್ದರೂ ನೀರು ಬಿಡುವ ಆಲೋಚನೆಯನ್ನು ಮುಖ್ಯಮಂತ್ರಿಗಳು ಮಾಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ರೈತರು ಕುಡಿಯುವ ನೀರಿಗೂ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆರೆ ರಾಜ್ಯಕ್ಕೆ ನೀರು ಬಿಡುವ ಬದಲು ಮೊದಲು ನಮ್ಮ ರಾಜ್ಯದ ರೈತರಿಗೆ ನೀರು ನೀಡಿ ನಮ್ಮ ಹಕ್ಕನ್ನು ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯೇ ಹೊರತು ತಮಿಳುನಾಡಿಗೆ ನೀರು ಬಿಡುವ 'ನೀರುಗಂಟಿ' ಅಲ್ಲ ಎಂದು ಖಾರವಾಗಿ ನುಡಿದ ಅವರು, ನಮ್ಮ ರೈತರ ನೀರಿನ ಹಕ್ಕನ್ನು ಉಳಿಸಬೇಕು ಎಂದು ನೆನಪಿಸಿದರು.
ಇದೇ ಸಂದರ್ಭದಲ್ಲಿ, ಅಕ್ರಮ ಬಾಂಗ್ಲಾದೇಶಿ ನಿವಾಸಿಗಳನ್ನು ಪತ್ತೆಹಚ್ಚಿ ಹೊರಹಾಕುವ ಕುರಿತಾಗಿ ಜಸ್ಟಿಸ್ ನಾಗ ಪ್ರಸನ್ನ ಅವರ ಪೀಠವು ರಾಜ್ಯ ಸರ್ಕಾರದ ಮುಂದೆ ತೀಕ್ಷ್ಣವಾದ ಪ್ರಶ್ನೆಗಳನ್ನು ಇಟ್ಟಿದೆ ಎಂದು ಸಿ.ಟಿ. ರವಿ ತಿಳಿಸಿದರು. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕಿ ರಾಜಕಾರಣ ಮಾಡುವುದು ರಾಷ್ಟ್ರದ್ರೋಹ ಎಂದ ಅವರು, ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಿ ನಿವಾಸಿಗಳು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದುಕೊಂಡು ವಾಸಿಸುತ್ತಿದ್ದಾರೆ ಎಂದು ಆರೋಪಿಸಿದರು. ಇವರು ಎಫ್‌ಆರ್‌ಆರ್‌ಒ (FRRO) ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕು ಹಾಗೂ ಅಕ್ರಮ ನಿವಾಸಿಗಳನ್ನು ಹಿಡಿದುಕೊಟ್ಟವರ ವಿರುದ್ಧ ಪ್ರಕರಣ ದಾಖಲಿಸದೆ ಅವರನ್ನು ಗೌರವಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.