ಮಂಗಳೂರು : ಐತಿಹಾಸಿಕ ಪ್ರಸಿದ್ಧಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಗುರುಪೂರ್ಣಿಮೆಯನ್ನು ಬುಧವಾರ ಅತ್ಯಂತ ಭಕ್ತಿ-ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಗುರುಪೂರ್ಣಿಮೆಯ ಪವಿತ್ರ ದಿನದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ರುದ್ರಪಾರಾಯಣ ಸೇರಿದಂತೆ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಶ್ರೀ ಮತ್ಸೇಂದ್ರನಾಥ, ಶ್ರೀ ಗೋರಕ್ಷನಾಥ, ಶ್ರೀ ಚೌರಂಗಿನಾಥ, ತ್ರಿಲೋಕೇಶ್ವರ, ವಿಷ್ಣು ದೇವರು ಹಾಗೂ ವ್ಯಾಸಮುನಿಗಳಿಗೆ ವಿಶೇಷ ಗುರುಪೂಜೆ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ವೈದಿಕ ವಿಧಿವಿಧಾನಗಳೊಂದಿಗೆ ಏಕಾದಶ ರುದ್ರಾಭಿಷೇಕ ನೆರವೇರಿತು. ಈ ಧಾರ್ಮಿಕ ಪರ್ವದ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡು ದೇವರ ಕೃಪಾಶೀರ್ವಾದ ಪಡೆದರು. ದಿನವಿಡೀ ದೇವಸ್ಥಾನದ ಆವರಣದಲ್ಲಿ ಭಕ್ತರ ದಟ್ಟಣೆ ಕಂಡುಬಂತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಗುರುಪರಂಪರೆಯ ಸ್ಮರಣಾರ್ಥ ಹಾಗೂ ವಿಶ್ವಶಾಂತಿ, ಲೋಕಕಲ್ಯಾಣ ಮತ್ತು ಸರ್ವರ ಸುಖ-ಸಮೃದ್ಧಿಗಾಗಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿತು.