ಮಂಗಳೂರು : ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಾಸಿಕ ಪಿಂಚಣಿಯನ್ನು ಈಗಿರುವ ₹3,000 ದಿಂದ ₹5,000ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ ಆಶ್ರಯದಲ್ಲಿ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಪಿಂಚಣಿದಾರರ ಪ್ರಥಮ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾವೇಶದಲ್ಲಿ ಯೋಜನೆಯ ವಿವರ ನೀಡಿದ ಅವರು, ಕಾರ್ಮಿಕರ ಮಕ್ಕಳ ಶಿಕ್ಷಣ ಧನಸಹಾಯವನ್ನು ಕನಿಷ್ಠ ₹5,000 ಕ್ಕೆ ನಿಗದಿಪಡಿಸುವುದು ಹಾಗೂ ಉನ್ನತ ವ್ಯಾಸಂಗದ ಸಹಾಯಧನವನ್ನು ದುಪ್ಪಟ್ಟುಗೊಳಿಸುವ ಯೋಜನೆಯಿದೆ. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ತಾಂತ್ರಿಕ ಶಿಕ್ಷಣ ತರಬೇತಿಗೆ ಖಾಯಂ ಯೋಜನೆ ರೂಪಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತೇಕ ಹಕ್ಕುಗಳು ಹೋರಾಟದಿಂದ ಸಿಕ್ಕಿರುವುದರಿಂದ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ ಎಂದ ಅವರು, 1996ರ ಸುದೀರ್ಘ ಹೋರಾಟದ ಫಲವಾಗಿಯೇ ಕಲ್ಯಾಣ ಮಂಡಳಿ ಜಾರಿಗೆ ಬಂದಿದ್ದನ್ನು ಸ್ಮರಿಸಿದರು. ಕಾರ್ಮಿಕರು ಅಧಿಕಾರಿಗಳಿಗೆ ದಂಬಾಲು ಬೀಳದೆ ನೇರವಾಗಿ ಸವಲತ್ತು ಪಡೆಯುವಂತಾಗಬೇಕು ಹಾಗೂ ನೊಂದವರ ಕಣ್ಣೀರು ಒರೆಸುವುದು ನೌಕರಶಾಹಿಯ ಪ್ರಮುಖ ಕರ್ತವ್ಯ ಎಂದು ಪ್ರತಿಪಾದಿಸಿದರು. ಅಲ್ಲದೆ, ಆಗಸ್ಟ್ 1 ರಿಂದ ಪ್ರತಿ ಜಿಲ್ಲೆಯಲ್ಲೂ ಜಾಗೃತಿ ಸಮಾವೇಶಗಳನ್ನು ನಡೆಸಿ, ಕಾರ್ಮಿಕರು ದುಡಿಯುವ ಸ್ಥಳಗಳಿಗೇ ನೇರವಾಗಿ ಭೇಟಿ ನೀಡಲಾಗುವುದು ಎಂದು ಪ್ರಕಟಿಸಿದರು.
ಮಂಗಳೂರು ವಿಭಾಗದ ಸಹಾಯಕಿ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ್ ಮಾತನಾಡಿ, ಸೂಕ್ತ ದಾಖಲೆಗಳಿಲ್ಲದೆ ಕಾರ್ಮಿಕರು ಸವಲತ್ತುಗಳಿಂದ ವಂಚಿತರಾಗುತ್ತಿದ್ದು, ನವೀಕರಣ ಹಾಗೂ ಅಗತ್ಯ ದಾಖಲೆಗಳನ್ನು ಸರಿಯಾಗಿ ಒದಗಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಫೆಡರೇಷನ್ ರಾಜ್ಯ ಅಧ್ಯಕ್ಷ ಕೆ. ಮಹಂತೇಶ್ ಮಾತನಾಡಿ, ದೇಶದ ಬೃಹತ್ ಕಟ್ಟಡ, ಅಣೆಕಟ್ಟು, ಮೆಟ್ರೋ ಹಾಗೂ ಸೇತುವೆಗಳ ನಿರ್ಮಾಣದಲ್ಲಿ ಕಾರ್ಮಿಕರ ಬೆವರಿನ ಜೊತೆಗೆ ರಕ್ತವೂ ಇದೆ, ಆದ್ದರಿಂದ ಅಪಾಯಕಾರಿ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಸೂಕ್ತ ಭದ್ರತೆಯ ಅಗತ್ಯವಿದೆ ಎಂದರು. ಸಮಾವೇಶದ ಅಧ್ಯಕ್ಷತೆಯನ್ನು ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ವಹಿಸಿದ್ದು, ವೇದಿಕೆಯಲ್ಲಿ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರಾಜ್ಯ ಮುಖಂಡರಾದ ವಸಂತ ಆಚಾರಿ, ಲಿಂಗರಾಜು ಬೆಂಗಳೂರು, ಚಂದ್ರಶೇಖರ ಕುಂದಾಪುರ, ಸುರೇಶ್ ಕಲ್ಲಾಗಾರ್, ಜಿಲ್ಲಾಧ್ಯಕ್ಷ ಕೆ. ಯಾದವ ಶೆಟ್ಟಿ ಹಾಗೂ ಕೋಶಾಧಿಕಾರಿ ಯೋಗೀಶ್ ಜಪ್ಪಿನಮೊಗರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.