image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ರಾಷ್ಟ್ರೀಯ RSETI ತಂಡ ಸಂವಾದ

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ರಾಷ್ಟ್ರೀಯ RSETI ತಂಡ ಸಂವಾದ

ಉಜಿರೆ : ರಾಷ್ಟ್ರೀಯ ರುಡ್‌ಸೆಟಿ ಅಕಾಡೆಮಿ ವತಿಯಿಂದ ಆಯೋಜಿಸಲಾದ "ಉದ್ಯಮಶೀಲತೆ ಅಭಿವೃದ್ಧಿ" ತರಬೇತಿ ಕಾರ್ಯಕ್ರಮದ ಭಾಗವಾಗಿ, ದೇಶದ ವಿವಿಧ ರಾಜ್ಯಗಳು ಮತ್ತು ಬ್ಯಾಂಕುಗಳನ್ನು ಪ್ರತಿನಿಧಿಸಿದ 32 ಆರ್‌ಸೆಟಿ (RSETI) ನಿರ್ದೇಶಕರು ಹಾಗೂ ಅಧ್ಯಾಪಕರ ತಂಡವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಅರ್ಥಪೂರ್ಣ ಸಂವಾದ ನಡೆಸಿತು.

ಜುಲೈ 20 ರಿಂದ ಆಗಸ್ಟ್ 1 ರವರೆಗೆ ನಡೆಯುತ್ತಿರುವ ಈ ರಾಷ್ಟ್ರೀಯ ಮಟ್ಟದ ತರಬೇತಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು, ಅಸ್ಸಾಂ, ಬಿಹಾರ ಸೇರಿದಂತೆ 14 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ವಿವಿಧ ಪ್ರಮುಖ ಬ್ಯಾಂಕುಗಳ ಅಧಿಕಾರಿಗಳು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಸಂವಾದದ ಸಂದರ್ಭದಲ್ಲಿ ಡಾ. ಹೆಗ್ಗಡೆಯವರು ಧರ್ಮಸ್ಥಳದ ಸೇವಾ ಪರಂಪರೆ, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಸ್ವ-ಉದ್ಯೋಗ ತರಬೇತಿ, ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ರುಡ್‌ಸೆಟ್ ಮತ್ತು ಆರ್‌ಸೆಟಿ ಸಂಸ್ಥೆಗಳು ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಸ್ವಾವಲಂಬನೆಯ ಹಾದಿ ತೋರುತ್ತಿರುವ ಕುರಿತು ತಮ್ಮ ಸುದೀರ್ಘ ಅನುಭವಗಳನ್ನು ಹಂಚಿಕೊಂಡರು.

ಧರ್ಮಸ್ಥಳದ ಸಮಗ್ರ ಅಭಿವೃದ್ಧಿ ಮಾದರಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅಧಿಕಾರಿಗಳು, ಈ ಅನುಭವಗಳು ದೇಶಾದ್ಯಂತ ಉದ್ಯಮಶೀಲತೆ ಮತ್ತು ಸ್ವ-ಉದ್ಯೋಗ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ದಾರಿದೀಪವಾಗಲಿವೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಪಿ. ವಿಜಯ ಕುಮಾರ್, ಉಪನ್ಯಾಸಕರಾದ ಲೋಹಿತ್ ಜೈನ್, ಅಬ್ರಹಾಂ ಜೇಮ್ಸ್, ಸುರೇಶ್ ಗೌಡ ಹಾಗೂ ರಾಷ್ಟ್ರೀಯ ರುಡ್‌ಸೆಟಿ ಅಕಾಡೆಮಿಯ ಅಧಿಕಾರಿಗಳು ಮತ್ತು ತರಬೇತಿ ಕಾರ್ಯಕ್ರಮದ ಸಂಯೋಜಕರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ