image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ಲಾಸ್ಮಾ ವಿಜ್ಞಾನ ಕ್ಷೇತ್ರದಲ್ಲಿ ಯುವಜನರ ಭಾಗಿತ್ವ ಅಗತ್ಯ: ಡಾ. ಎನ್. ರಾಮಸುಬ್ರಮಣ್ಯನ್

ಪ್ಲಾಸ್ಮಾ ವಿಜ್ಞಾನ ಕ್ಷೇತ್ರದಲ್ಲಿ ಯುವಜನರ ಭಾಗಿತ್ವ ಅಗತ್ಯ: ಡಾ. ಎನ್. ರಾಮಸುಬ್ರಮಣ್ಯನ್

ಮೂಡುಬಿದಿರೆ : ವಿಜ್ಞಾನವನ್ನು ಕೇವಲ ಘನ, ದ್ರವ ಮತ್ತು ಅನಿಲ ಸ್ಥಿತಿಗಳಿಗೆ ಸೀಮಿತಗೊಳಿಸದೆ, ಅದರ ನಾಲ್ಕನೇ ಸ್ಥಿತಿಯಾದ ಪ್ಲಾಸ್ಮಾ ಕುರಿತು ವಿದ್ಯಾರ್ಥಿಗಳು ಆಸಕ್ತಿ ಹಾಗೂ ಅರಿವು ಬೆಳೆಸಿಕೊಳ್ಳಬೇಕು ಎಂದು ಗಾಂಧಿನಗರದ ಇನ್‌ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ (ಐಪಿಆರ್)ನ ವೈಜ್ಞಾನಿಕ ಅಧಿಕಾರಿ ಡಾ. ಎನ್. ರಾಮಸುಬ್ರಮಣ್ಯನ್ ಹೇಳಿದರು. ಇಲ್ಲಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರದ ಅಣುಶಕ್ತಿ ಇಲಾಖೆ (ಡಿಎಇ) ಹಾಗೂ ಐಪಿಆರ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 5 ದಿನಗಳ 4ನೇ ರಾಜ್ಯ ಮಟ್ಟದ ಪ್ಲಾಸ್ಮಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ವೈಜ್ಞಾನಿಕ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಭೌತಶಾಸ್ತ್ರ, ಗಣಿತ ಹಾಗೂ ಎಂಜಿನಿಯರಿಂಗ್ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ಲಾಸ್ಮಾ ತಂತ್ರಜ್ಞಾನವು ಎಲೆಕ್ಟ್ರಾನಿಕ್ಸ್, ಸೂಪರ್‌ಕಂಡಕ್ಟಿವಿಟಿ, ವೈದ್ಯಕೀಯ, ಜವಳಿ ಹಾಗೂ ಅಂತರಿಕ್ಷ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಭೂಮಿಯ ಮೇಲೆ ಕೃತಕ ಸೂರ್ಯನನ್ನು ನಿರ್ಮಿಸುವ ಮತ್ತು ಭವಿಷ್ಯದ ವಿದ್ಯುತ್ ಅಭಾವ ನೀಗಿಸಿ ಸುಸ್ಥಿರ, ಸ್ವಚ್ಛ ಶಕ್ತಿಯನ್ನು ಒದಗಿಸುವ ಅಣುಸಂಯೋಜನೆ (ಫ್ಯೂಷನ್) ಸಂಶೋಧನೆಗಳಲ್ಲಿ ಪ್ಲಾಸ್ಮಾ ವಿಜ್ಞಾನದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಈ ಗುರಿಯನ್ನು ಸಾಧಿಸಲು ವಿದ್ಯಾರ್ಥಿಗಳು ನವೋದ್ಯಮ ಮತ್ತು ಸಂಶೋಧನೆಗಳ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ಸಮಾರಂಭದಲ್ಲಿ ಐಪಿಆರ್ ವೈಜ್ಞಾನಿಕ ಅಧಿಕಾರಿ ಚೇತನ್ ಜರಿವಾಲಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಸದಾಕತ್ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಶಶಿಕುಮಾರ್ ಉಪಸ್ಥಿತರಿದ್ದರು. ಶಾರ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ಟೆಲ್ಲಾ ಸಾಜಿ ಸ್ವಾಗತಿಸಿದರು. ಪ್ರದರ್ಶನದಲ್ಲಿ ಪ್ಲಾಸ್ಮಾದ ಮೂಲತತ್ತ್ವಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅದರ ಅನ್ವಯಿಕೆಗಳನ್ನು ವಿವರಿಸುವ ಕೌತುಕದ ಮಾದರಿಗಳನ್ನು ಪ್ರದರ್ಶಿಸಲಾಯಿತು.

Category
ಕರಾವಳಿ ತರಂಗಿಣಿ