image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಎಪಿಎಂಸಿ ಕಚೇರಿಯಲ್ಲಿ ಲೈಂಗಿಕ ಕಿರುಕುಳ ಆರೋಪ: ಹಸಿರು ಸೀರೆ ಧರಿಸಿ ಕಾರ್ಯದರ್ಶಿಗೆ ಮಹಿಳಾ ತಂಡ ತರಾಟೆ

ಮಂಗಳೂರು ಎಪಿಎಂಸಿ ಕಚೇರಿಯಲ್ಲಿ ಲೈಂಗಿಕ ಕಿರುಕುಳ ಆರೋಪ: ಹಸಿರು ಸೀರೆ ಧರಿಸಿ ಕಾರ್ಯದರ್ಶಿಗೆ ಮಹಿಳಾ ತಂಡ ತರಾಟೆ

ಮಂಗಳೂರು : ಮಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿಯ ಡಿ ಗ್ರೂಪ್ ಮಹಿಳಾ ಉದ್ಯೋಗಿಗೆ ಕಾರ್ಯದರ್ಶಿ ಸಿ.ಎಚ್. ಮೋಹನ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಣದ ಆಮಿಷ ಒಡ್ಡಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಲ್ಲದೆ, ಸೋಮವಾರ ಕಚೇರಿಗೆ ಹಸಿರು ಸೀರೆ ಧರಿಸಿ ಬರುವಂತೆ ಸೂಚನೆ ನೀಡಿದ್ದರೆಂಬ ಗಂಭೀರ ಆರೋಪ ವ್ಯಕ್ತವಾಗಿದೆ.

ಈ ಸಂಗತಿ ಹೊರಬೀಳುತ್ತಿದ್ದಂತೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡ ಸೋಮವಾರವೇ ಹಸಿರು ಸೀರೆ ಧರಿಸಿ ಎಪಿಎಂಸಿ ಕಚೇರಿಗೆ ದಿಢೀರ್ ಭೇಟಿ ನೀಡಿತು. ನೇರವಾಗಿ ಕಚೇರಿಗೆ ಪ್ರವೇಶಿಸಿದ ಮಹಿಳಾ ಪ್ರತಿನಿಧಿಗಳು, "ನೀವು ಹೇಳಿದಂತೆ ಹಸಿರು ಸೀರೆ ಹಾಕಿಕೊಂಡು ಬಂದಿದ್ದೇವೆ... ಈಗ ಹೇಳಿ" ಎಂದು ಕಾರ್ಯದರ್ಶಿ ಸಿ.ಎಚ್. ಮೋಹನ್ ಅವರನ್ನು ಮುಖಾಮುಖಿಯಾಗಿ ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಯ ಗೌರವ, ಆತ್ಮಸಮ್ಮಾನ ಹಾಗೂ ಸುರಕ್ಷತೆಗೆ ಧಕ್ಕೆ ತರುವಂತಹ ಯಾವುದೇ ಅಸಭ್ಯ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಮಹಿಳಾ ತಂಡ, ಈ ಬಗ್ಗೆ ತಕ್ಷಣದ ಸ್ಪಷ್ಟನೆಗೆ ಆಗ್ರಹಿಸಿತು. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ತಕ್ಷಣ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

Category
ಕರಾವಳಿ ತರಂಗಿಣಿ