ಮಂಗಳೂರು : ರಾಜ್ಯದ 31 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಅಧ್ಯಕ್ಷರ ಹುದ್ದೆ ಆಯ್ಕೆಗಾಗಿ 'ಸಂಘಟನ್ ಸೃಜನ್ ಅಭಿಯಾನ' ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪ್ರಕ್ರಿಯೆಯು ಜುಲೈ 29 ರಿಂದ ಆಗಸ್ಟ್ 12 ರವರೆಗೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಾಲಿ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿ ಎಐಸಿಸಿ ವೀಕ್ಷಕರಾಗಿ ಕೋಝಿಕ್ಕೋಡ್ ಶಾಸಕ ಜಯಂತ್ ನೇತೃತ್ವದಲ್ಲಿ ಕೆಪಿಸಿಸಿಯ ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿಯು ಜುಲೈ 28 ರಂದು ಈ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಈ ಸಮಿತಿಯು ಜುಲೈ 28 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದು, 10:30ಕ್ಕೆ ಪ್ರತಿನಿಧಿಗಳ ಜೊತೆ ಹಾಗೂ ಸರ್ವ ಸದಸ್ಯರ ಸಭೆ ನಡೆಸಲಿದೆ. ಮಧ್ಯಾಹ್ನದ ಬಳಿಕ ಶಾಸಕರು, ಮಾಜಿ ಶಾಸಕರು ಮತ್ತು ಪದಾಧಿಕಾರಿಗಳನ್ನು ಭೇಟಿ ಮಾಡುವ ಕಾರ್ಯ ನಡೆಯಲಿದೆ. ಜುಲೈ 29 ರಿಂದ ಈ ಸಮಿತಿಯು 8 ವಿಧಾನಸಭಾ ಕ್ಷೇತ್ರಗಳಲ್ಲಿರುವ 17 ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಲಿದೆ. ಆಗಸ್ಟ್ 11 ರವರೆಗೆ ಈ ಅಭಿಪ್ರಾಯ ಸಂಗ್ರಹ ಪ್ರತಿ ಬ್ಲಾಕ್ ಸಮಿತಿಯಲ್ಲಿ ನಡೆಸಿ, ಆಗಸ್ಟ್ 12 ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಸಕ್ತ ಸಮಾನ ಮನಸ್ಕರಿಗೆ ಪಕ್ಷದ ಚಟುವಟಿಕೆಗಳ ಬಗ್ಗೆ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಬಳಿಕ ಸಮಿತಿಯು ತಳಮಟ್ಟದ ಸದಸ್ಯರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು, ಸಲ್ಲಿಕೆಯಾದ ಅರ್ಜಿಗಳಲ್ಲಿ 3 ರಿಂದ 6 ಹೆಸರುಗಳನ್ನು ಪಕ್ಷದ ಅಧ್ಯಕ್ಷ ಹುದ್ದೆಗಾಗಿ ಆಯ್ಕೆ ಮಾಡಿ ಹೈಕಮಾಂಡ್‌ಗೆ ಸಲ್ಲಿಸಲಿದೆ. ಒಟ್ಟು ಈ ಪ್ರಕ್ರಿಯೆಯು ಒಂದು ತಿಂಗಳ ಅವಧಿಯಲ್ಲಿ ನಡೆದು ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಹಾಲಿ ಐದು ವರ್ಷಗಳ ಕಾಲ ಅಧ್ಯಕ್ಷರಾಗಿದ್ದವರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಪಕ್ಷದಿಂದ ಯಾರೂ ಕೂಡ ಸ್ಪರ್ಧಿಸಬಹುದಾಗಿದ್ದು, ಕೇವಲ ಅರ್ಜಿಯ ಆಧಾರದಲ್ಲಿ ಮಾತ್ರವಲ್ಲದೆ, ಸಮಿತಿಯು ತಮ್ಮ ಭೇಟಿಯ ಸಂದರ್ಭ ಪಕ್ಷದ ತಳಮಟ್ಟದಿಂದ ವ್ಯಕ್ತವಾದ ಅಭಿಪ್ರಾಯಗಳ ಆಧಾರದಲ್ಲಿಯೂ ಅರ್ಹ ವ್ಯಕ್ತಿಗಳನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಬಹುದಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಸ್ಪ್ಯಾನಿ ಅಲ್ವಾರಿಸ್, ಸದಾಶಿವ ಉಳ್ಳಾಲ್, ವಿಕಾಸ್ ಶೆಟ್ಟಿ, ಲಾವಣ್ಯ ಬಳ್ಳಾಲ್, ಶುಭೋದಯ ಆಳ್ವ, ಎಂ.ಎಸ್. ಮಹಮ್ಮದ್, ಸುರೇಂದ್ರ ಕಾಂಬ್ಳಿ, ಟಿ.ಕೆ. ಸುಧೀರ್, ಉಷಾ ಅಂಚನ್, ಸಾರಿಕಾ ಪೂಜಾರಿ, ಲಾರೆನ್ಸ್ ಮೊದಲಾದವರು ಉಪಸ್ಥಿತರಿದ್ದರು.