image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜನವರಿಯಲ್ಲಿ ಅದ್ದೂರಿ 'ಆಳ್ವಾಸ್ ನುಡಿಸಿರಿ–ವಿರಾಸತ್' : ಪ್ರಥಮ ಸಮಾಲೋಚನಾ ಸಭೆಯಲ್ಲಿ ನಿರ್ಧಾರ

ಜನವರಿಯಲ್ಲಿ ಅದ್ದೂರಿ 'ಆಳ್ವಾಸ್ ನುಡಿಸಿರಿ–ವಿರಾಸತ್' : ಪ್ರಥಮ ಸಮಾಲೋಚನಾ ಸಭೆಯಲ್ಲಿ ನಿರ್ಧಾರ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ 'ಆಳ್ವಾಸ್ ನುಡಿಸಿರಿ–ವಿರಾಸತ್' ಅನ್ನು ಮುಂಬರುವ ಜನವರಿಯಲ್ಲಿ ಒಂದೇ ವೇಳೆಯಲ್ಲಿ ಅದ್ದೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಸ್ವಗೃಹದಲ್ಲಿ ನಡೆದ ಪ್ರಥಮ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಈ ಬಾರಿಯ ಉತ್ಸವದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವುದರ ಜೊತೆಗೆ ಯುವಜನತೆ, ಕನ್ನಡದ ಭವಿಷ್ಯ, ದೇಶೀಯತೆ, ಪರಿಸರ ಸಂರಕ್ಷಣೆ ಹಾಗೂ ಸಹಬಾಳ್ವೆಯಂತಹ ಸಮಕಾಲೀನ ವಿಷಯಗಳ ಕುರಿತು ಗಂಭೀರ ಚರ್ಚೆಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದರು. ಸಮಾಜದ ವಿವಿಧ ವರ್ಗಗಳನ್ನು ಒಂದೇ ವೇದಿಕೆಗೆ ತಂದು ಸಂವಾದ, ಸೃಜನಶೀಲತೆ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಸೆಯುವ ಸಮಗ್ರ ಉತ್ಸವವಾಗಿ ಇದನ್ನು ರೂಪಿಸುವ ಸಂಕಲ್ಪ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಹಿರಿಯ ಸಾಹಿತಿ ಪಾದೆಕಲ್ಲು ವಿಷ್ಣು ಭಟ್ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ವೈಚಾರಿಕತೆಯನ್ನು ಬೆಳೆಸುವ ಸಾಂಸ್ಕೃತಿಕ ಚಳವಳಿಯಾಗಿ ನುಡಿಸಿರಿ ಬೆಳೆಯುತ್ತಿರುವುದನ್ನು ಶ್ಲಾಘಿಸಿದರು. ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹಾಗೂ ಯುವಜನರಲ್ಲಿ ಕನ್ನಡದ ಅಭಿಮಾನ ಮೂಡಿಸುವಲ್ಲಿ ಡಾ. ಆಳ್ವ ಅವರ ದೂರದೃಷ್ಟಿಯ ಕೊಡುಗೆ ಅನನ್ಯ ಎಂದರು.

ಸಭೆಯಲ್ಲಿ ಉತ್ಸವದ ಪರಿಕಲ್ಪನೆ, ಸರ್ವಾಧ್ಯಕ್ಷರು ಹಾಗೂ ಉದ್ಘಾಟಕರ ಆಯ್ಕೆ, ವಿವಿಧ ಗೋಷ್ಠಿಗಳ ವಿಷಯಗಳು, ಸಂಪನ್ಮೂಲ ವ್ಯಕ್ತಿಗಳ ಪಟ್ಟಿ, ನುಡಿಸಿರಿ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಹಾಗೂ ವೇದಿಕೆಗಳ ನಾಮಕರಣ ಸೇರಿದಂತೆ ಹಲವು ಮುಖ್ಯ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಡಾ. ಎಂ. ಪಿ. ಶ್ರೀನಾಥ್, ಬಾಲಕೃಷ್ಣ ಶೆಟ್ಟಿ, ತುಕಾರಾಮ್ ಪೂಜಾರಿ, ಶಕುಂತಲಾ ಶೆಟ್ಟಿ, ಸತ್ಯನಾರಾಯಣ ಮಲ್ಲಿಪಟ್ಣ, ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ