ಮಂಗಳೂರು: ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ತುರ್ತು ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ‘ಪಿಎಂ ರಾಹತ್’ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯನ್ನು ಮಾದರಿಯಾಗಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸೂಚಿಸಿದ್ದಾರೆ. ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ತಿಮ್ಮಯ್ಯ, ಡಿ.ಸಿ.ಪಿ ರವಿಶಂಕರ್ ಹಾಗೂ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ತೋರುವ ಆಸ್ಪತ್ರೆಗಳ ವಿರುದ್ಧ ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಯಾವುದೇ ದಾಖಲೆಗಳ ತೊಡಕಿಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 7 ದಿನಗಳವರೆಗೆ ಗರಿಷ್ಠ ₹1.50 ಲಕ್ಷ ರೂಪಾಯಿವರೆಗೆ ಉಚಿತ ತುರ್ತು ಚಿಕಿತ್ಸೆ ಒದಗಿಸಲು ಅವಕಾಶವಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸಾರ್ವಜನಿಕರಲ್ಲಿ ಯಾವುದೇ ಭಯ ಅಥವಾ ಹಿಂಜರಿಕೆ ಇರಬಾರದು ಎಂಬ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಚಿಕಿತ್ಸಾ ವೆಚ್ಚ ಸರ್ಕಾರದಿಂದ ಸಿಗಲು ಆಸ್ಪತ್ರೆಗಳು ಗಾಯಾಳು ದಾಖಲಾದ 24 ಗಂಟೆಯೊಳಗೆ (ವಿಷಮ ಸ್ಥಿತಿಯಲ್ಲಿದ್ದರೆ ಗರಿಷ್ಠ 48 ಗಂಟೆಗಳಲ್ಲಿ) e-DAR ಪೋರ್ಟಲ್‌ನಲ್ಲಿ ಮಾಹಿತಿ ನಮೂದಿಸುವುದು ಕಡ್ಡಾಯವಾಗಿದೆ. ಪೊಲೀಸ್ ಇಲಾಖೆಯ ಪರಿಶೀಲನೆ ಹಾಗೂ ಅನುಮೋದನೆ ತಕ್ಷಣವೇ TMS ಪೋರ್ಟಲ್‌ಗೆ ರವಾನೆಯಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ನಮೂದಿಸದಿದ್ದರೆ ಅರ್ಹ ಸಂತ್ರಸ್ತರು ಉಚಿತ ಚಿಕಿತ್ಸೆಯಿಂದ ವಂಚಿತರಾಗುವ ಅಪಾಯವಿರುವುದರಿಂದ ಎಲ್ಲಾ ಆಸ್ಪತ್ರೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಂಸದರು ನಿರ್ದೇಶನ ನೀಡಿದರು.
ಪ್ರತಿ ತಾಲೂಕು ಮಟ್ಟದಲ್ಲೂ ಸಭೆಗಳನ್ನು ನಡೆಸಿ, ಮಾಸಿಕ ಪ್ರಗತಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಸೂಚಿಸಿದ ಅವರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆಸ್ಪತ್ರೆಗಳು ಪೂರ್ಣ ಸಮನ್ವಯದಿಂದ ಕೆಲಸ ಮಾಡಬೇಕು ಎಂದರು. ಇದೇ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಅಪಘಾತ ಗಾಯಾಳುಗಳ ಜೀವ ಉಳಿಸಲು ಸಾರ್ವಜನಿಕರು ಯಾವುದೇ ಪೊಲೀಸ್ ಅಥವಾ ಕಾನೂನಿನ ಭಯವಿಲ್ಲದೆ ಮುಕ್ತವಾಗಿ ನೆರವಿಗೆ ಮುಂದೆ ಬರಬೇಕೆಂದು ಮನವಿ ಮಾಡಿದರು.'