ಮಂಗಳೂರು : ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ಉಂಟಾಗಿ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅನಾನುಕೂಲ ಹಾಗೂ ಟ್ರಾಫಿಕ್ ದಟ್ಟಣೆ ಉಂಟಾದ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಆಯೋಜಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಭಾಗವಹಿಸುವ ಜನರ ನಿಖರ ಸಂಖ್ಯೆ ಮತ್ತು ಸಭೆಯ ಯೋಜನೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲದಿದ್ದರೂ, ಸಾಮಾನ್ಯ ಷರತ್ತುಗಳೊಂದಿಗೆ ಆಯೋಜಕರಿಂದ ಮುಚ್ಚಳಿಕೆ ಪಡೆದು ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಯನ್ನು ಮುನ್ನೆಚ್ಚರಿಕೆಯಾಗಿ ಪರಿಗಣಿಸಿ ಅಗತ್ಯ ಸಿಬ್ಬಂದಿ ನಿಯೋಜನೆ, ಸಂಚಾರ ಮಾರ್ಗ ಬದಲಾವಣೆ ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಕಾನೂನುಬದ್ಧವಾಗಿ ನಡೆಯುವ ಸಾರ್ವಜನಿಕ ಸಭೆಗಳು ಹಾಗೂ ಪ್ರತಿಭಟನೆಗಳಿಗೆ ಪೊಲೀಸ್ ಇಲಾಖೆಯು ಅಗತ್ಯ ಸಹಕಾರವನ್ನು ನೀಡಲಿದೆ. ಆದರೆ, ಇದರೊಂದಿಗೆ ಸಾರ್ವಜನಿಕ ಸುವ್ಯವಸ್ಥೆ ಮತ್ತು ಭದ್ರತೆಯನ್ನು ಕಾಪಾಡುವುದು ಇಲಾಖೆಯ ಮುಖ್ಯ ಬದ್ಧತೆಯಾಗಿದ್ದು, ಅದನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.