ಮಂಗಳೂರು : ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಯಾವುದೇ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪರಿಷ್ಕರಣೆಯಿಂದ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ಮತದಾರರಿಗೆ ಬೇಡ. ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗಿದ್ದರೆ, ನಿಗದಿತ ದಾಖಲೆಗಳು ಹಾಗೂ ಡಿಕ್ಲರೇಷನ್‌ನೊಂದಿಗೆ 'ನಮೂನೆ 6' (Form 6) ಸಲ್ಲಿಸಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಮತದಾರರಿಂದ ಸ್ವೀಕರಿಸಲಾದ ಎನ್ಯುಮರೇಷನ್ ಫಾರಂಗಳನ್ನು ತ್ವರಿತವಾಗಿ ಡಿಜಿಟೈಸ್ ಮಾಡುವುದರಿಂದ ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ಸೂಚಿಸಿದರು. ಮತದಾರರ ಗೈರುಹಾಜರಿ, ಸ್ಥಳಾಂತರ, ಮರಣ ಹಾಗೂ ನಕಲಿ ಮತದಾರರ (ASDF) ಪ್ರಕರಣಗಳನ್ನು ಸಮಗ್ರವಾಗಿ ಪರಿಶೀಲಿಸಿ ಮಹಜರು ನಡೆಸಿ, ಅದರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಏಜೆಂಟರಿಗೂ ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವಿವರ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲೆಯಲ್ಲಿ ಒಟ್ಟು 18,03,766 ಮತದಾರರಿದ್ದು, ಎಲ್ಲರಿಗೂ ಎನ್ಯುಮರೇಷನ್ ಫಾರಂ ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ 14,97,139 ಫಾರಂಗಳನ್ನು ಡಿಜಿಟೈಸ್ ಮಾಡುವ ಮೂಲಕ ಶೇಕಡಾ 83ರಷ್ಟು ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ 65,588 ಮತದಾರರನ್ನು ASDF ಎಂದು ಗುರುತಿಸಲಾಗಿದ್ದು, ಮತದಾರರ ನೆರವಿಗಾಗಿ 1,098 ಸೌಲಭ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, 1950 ಟೋಲ್ ಫ್ರೀ ಸಹಾಯವಾಣಿ ಮೂಲಕ ಸಾರ್ವಜನಿಕರ ಪ್ರಶ್ನೆ ಮತ್ತು ಸಂಶಯಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.
ಸಭೆಯ ಬಳಿಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಿಟಾನಿಯೋ ಶಾಲೆ ಮತಗಟ್ಟೆಗೆ ಭೇಟಿ ನೀಡಿ SIR ಪ್ರಕ್ರಿಯೆ ಪರಿಶೀಲಿಸಿದರು. ಬಿಎಲ್‌ಒಗಳು ಸಂಗ್ರಹಿಸಿದ ಫಾರಂಗಳನ್ನು ವೀಕ್ಷಿಸಿ ಸಲಹೆ-ಸೂಚನೆಗಳನ್ನು ನೀಡಿದ ಅವರು, ಮತಗಟ್ಟೆಯ ಸಿದ್ಧತೆ ಮತ್ತು ಏರ್ಪಡಿಸಿದ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ರಾಜು, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಹಾನಗರಪಾಲಿಕೆ ಉಪ ಆಯುಕ್ತೆ ಅಕ್ಷತಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.