ಮಂಗಳೂರು :bಬ್ರಿಟನ್ ಮತ್ತು ಕರ್ನಾಟಕದ ನಡುವೆ ಉದ್ಯಮ ವಿಸ್ತರಣೆಗೆ ಅತ್ಯುತ್ತಮ ಅವಕಾಶಗಳಿದ್ದು, ಮುಖ್ಯವಾಗಿ ಬೆಂಗಳೂರು ಹಾಗೂ ಮಂಗಳೂರು ಪ್ರದೇಶಗಳು ವಿಭಿನ್ನ ಉದ್ಯಮಗಳಿಗೆ ಅತ್ಯಂತ ಸೂಕ್ತವಾಗಿವೆ ಎಂದು ಕರ್ನಾಟಕ ರಾಜ್ಯದ ಬ್ರಿಟಿಷ್ ಉಪ ಹೈ ಕಮೀಷನರ್ ಚಂದು ಕೆ. ಅಯ್ಯರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಕರ್ನಾಟಕ ಮತ್ತು ಬ್ರಿಟನ್ ನಡುವೆ ವಾಣಿಜ್ಯ ವ್ಯವಹಾರಗಳು ಮುಂದುವರಿದುಕೊಂಡು ಬಂದಿವೆ. ಬೆಂಗಳೂರು ಹಾಗೂ ಮಂಗಳೂರಿನ ಮೂಲಕ ಬ್ರಿಟನ್‌ಗೆ ಕಾಫಿ, ಕರಿಮೆಣಸು, ಏಲಕ್ಕಿ, ಬ್ಯಾಡಗಿ ಮೆಣಸಿನಕಾಯಿ, ಗೇರು ಬೀಜ ಹಾಗೂ ಕೈಮಗ್ಗ ಉತ್ಪನ್ನಗಳು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ. ಪ್ರಸ್ತುತ ಭಾರತದಿಂದ ಆಮದಾಗುವ ಮತ್ತು ಲಂಡನ್‌ನಿಂದ ರಫ್ತಾಗುವ ವಸ್ತುಗಳಿಗೆ ಕನಿಷ್ಠ ಮಟ್ಟದ ಸೀಮಾ ಸುಂಕ ವಿಧಿಸಲಾಗುತ್ತಿದ್ದು, ಇದರಿಂದ ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಿದೆ. ಅಲ್ಲದೆ, ಇತ್ತೀಚೆಗೆ ಲಂಡನ್ ಮತ್ತು ಬೆಂಗಳೂರು ನಡುವೆ 34 ವಿಮಾನಗಳು ಸಂಚಾರ ನಡೆಸುವ ವೇಳಾಪಟ್ಟಿಯನ್ನು ಹೊಂದಿವೆ ಎಂದರು.
ಆಗಸ್ಟ್ 15 ರಂದು ಕರ್ನಾಟಕ ಸರ್ಕಾರದ ಸಚಿವ ಎಂ. ಬಿ. ಪಾಟೀಲ್ ಅವರೊಂದಿಗೆ ಲಂಡನ್ ಹಾಗೂ ಕರ್ನಾಟಕದ ನಡುವಿನ ಉದ್ಯಮ ವ್ಯವಹಾರಗಳ ಕುರಿತು ಪ್ರಮುಖ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. ಮಂಗಳೂರು ನಗರವು ಶಿಕ್ಷಣ, ವೈದ್ಯಕೀಯ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವಿಭಿನ್ನ ಸಾಧನೆ ಮಾಡುತ್ತಾ ಬೆಳೆಯುತ್ತಿದೆ. ಮಂಗಳೂರಿನ ಗೇರು ಉತ್ಪನ್ನಗಳು, ಮೀನು ಹಾಗೂ ಮೀನಿನ ಉತ್ಪನ್ನಗಳು, ಐಡಿಯಲ್ ಮತ್ತು ನ್ಯಾಚುರಲ್ ಐಸ್‌ಕ್ರೀಮ್, ಎಂ.ಟಿ.ಆರ್. ಮಸಾಲೆ ಹಾಗೂ ಬೋಳಾಸ್ ಕ್ಯಾಶ್ಯು ಸೇರಿದಂತೆ ವಿವಿಧ ಪ್ರಮುಖ ಉತ್ಪನ್ನಗಳ ಮಳಿಗೆಗಳು ಲಂಡನ್‌ನಲ್ಲಿವೆ.
ಶೈಕ್ಷಣಿಕ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಯು.ಕೆ.ಯ ಖ್ಯಾತ ವಿಶ್ವವಿದ್ಯಾನಿಲಯಗಳು ಕರ್ನಾಟಕದಲ್ಲಿ, ಮುಖ್ಯವಾಗಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ತಮ್ಮ ಶಾಖೆಗಳನ್ನು ಆರಂಭಿಸಲಿವೆ. ಲಂಡನ್‌ನ ಪ್ರಮುಖ ವಿಶ್ವವಿದ್ಯಾನಿಲಯಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುತ್ತಿದ್ದು, ಕಲಿಕೆಗಾಗಿ ಯು.ಕೆ.ಯಿಂದ 18 ತಿಂಗಳ ವೀಸಾ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ ಎಂದು ಚಂದು ಕೆ. ಅಯ್ಯರ್ ಮಾಹಿತಿ ನೀಡಿದ್ದಾರೆ.