image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಉದ್ಘಾಟನೆ

ಧರ್ಮಸ್ಥಳದಲ್ಲಿ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಉದ್ಘಾಟನೆ

ಧರ್ಮಸ್ಥಳ : ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆ ಮೋಹನ್ ಪುಸ್ತಕಮಾಲೆ, ಪರಿಮಳ ಪ್ರಕಾಶನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ 'ರಾಷ್ಟ್ರಮಟ್ಟದ ಸಾಹಿತ್ಯ ಸೌರಭ' ಸಮಾರಂಭವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಸಮಾರಂಭದಲ್ಲಿ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಎಲೆಮರೆಯ ಕಾಯಿಯಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆ-ಸಾಧನೆ ಮಾಡಿದ ಸಾಮಾನ್ಯ ಜನರನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಸಕ್ರಿಯವಾಗಿ ಬಳಸಿ ಉಳಿಸಿದಾಗ ಮಾತ್ರ ಸಾಹಿತ್ಯ ಮತ್ತು ಸಂಸ್ಕೃತಿಯ ನೈಜ ಬೆಳವಣಿಗೆ ಸಾಧ್ಯ. ಕರಾವಳಿ ಭಾಗದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆಗಳ ಮೂಲಕ ಶುದ್ಧ ಕನ್ನಡ, ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಸಾರವಾಗುತ್ತಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಇದು ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಏಳು ಕವನ ಸಂಕಲನ ಹಾಗೂ ಇಪ್ಪತ್ತು ಹೊಸ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಹೇಮಾವತಿ ವೀ. ಹೆಗ್ಗಡೆಯವರು, ಪ್ರತಿಯೊಂದು ಮನೆಯಲ್ಲಿಯೂ ಸಣ್ಣ ಗ್ರಂಥಾಲಯವನ್ನು ಆರಂಭಿಸಿ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಾಹಿತ್ಯವು ಮನುಷ್ಯರನ್ನು ಮತ್ತು ಮನಸ್ಸುಗಳನ್ನು ಸೌಹಾರ್ದಯುತವಾಗಿ ಬೆಸೆಯುವ ಕೊಂಡಿಯಾಗಿದ್ದು, ನಮ್ಮ ಭಾಷೆ, ಧರ್ಮ ಹಾಗೂ ಸಂಸ್ಕೃತಿಯ ಬೇರುಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷ ಮಣ್ಣೆ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ 31 ಜಿಲ್ಲೆಗಳಲ್ಲೂ ಉದಯೋನ್ಮುಖ ಸಾಹಿತಿಗಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಎಂ.ಪಿ. ಶ್ರೀನಾಥ್, ಯದುಪತಿ ಗೌಡ, ಎ.ವಿ. ಶೆಟ್ಟಿ, ಸುಬ್ರಹ್ಮಣ್ಯ ಪ್ರಸಾದ್, ಪುರಂದರ ಭಟ್, ಲಕ್ಷ್ಮಿ ಬೆಂಗಳೂರು, ಡಾ. ಸರಸ್ವತಿ ಚಂದ್ರಶೇಖರ್, ಚೆನ್ನಪ್ಪ ಗೌಡ ಹಾಗೂ ಪ್ರವೀಣ್ ಅಮ್ಮೆಂಬಳ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಭಾಗವಾಗಿ ಕವಿಗೋಷ್ಠಿ, ಕವನವಾಚನ ಮತ್ತು ನೃತ್ಯ ಪ್ರದರ್ಶನಗಳು ನೆರವೇರಿದವು. ಪರಿಮಳ ಪ್ರಕಾಶನದ ಅಧ್ಯಕ್ಷೆ ಪರಿಮಳ ಸ್ವಾಗತಿಸಿದರೆ, ಪರಮಾನಂದ ಬಳ್ಳೊಳ್ಳಿ ಧನ್ಯವಾದ ಸಮರ್ಪಿಸಿದರು. ತೇಜಸ್ವಿನಿ, ಅನುಪಮಾ ಚಂದ್ರು, ಲಕ್ಕೂರು ನಾಗರಾಜು ಹಾಗೂ ಗೀತಾ ವಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಭಾನುವಾರ ಡಾ. ಶಿವರಾಮ ಕಾರಂತರ ಹುಟ್ಟೂರಾದ ಕೋಟದಲ್ಲೂ ಸಾಹಿತ್ಯ ಸೌರಭ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ