ಮಂಗಳೂರು: ನಗರದ ಪ್ರಸಿದ್ಧ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬವು 2026ರ ಆಗಸ್ಟ್ 10, ಸೋಮವಾರದಂದು ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲ್ಪಡಲಿದೆ. ಈ ಧಾರ್ಮಿಕ ಮಹೋತ್ಸವದ ಸಿದ್ಧತೆಗಳು ಈಗಾಗಲೆ ಭರದಿಂದ ಸಾಗಿದ್ದು, ಭಕ್ತಾದಿಗಳು ಕೃತಜ್ಞತಾ ಭಾವದೊಂದಿಗೆ ಪಾಲ್ಗೊಳ್ಳಲು ಚರ್ಚ್ ಆಡಳಿತ ಮಂಡಳಿಯು ಆತ್ಮೀಯವಾಗಿ ಆಹ್ವಾನಿಸಿದೆ.
ಹಬ್ಬದ ಪೂರ್ವಭಾವಿಯಾಗಿ ಜುಲೈ 25 ರಂದು 'ಸ್ವಚ್ಛತಾ ಅಭಿಯಾನ' ಹಾಗೂ ಜುಲೈ 26 ರಂದು ಸಾಂಪ್ರದಾಯಿಕ 'ಹೊರೆ ಕಾಣಿಕೆ' ಮೆರವಣಿಗೆಯು ವಿಜೃಂಭಣೆಯಿಂದ ಜರುಗಲಿದೆ. ಈ ಬಾರಿಯ ಹಬ್ಬದಲ್ಲಿ 'ವೈದ್ಯಕೀಯ ನೆರವು ನಿಧಿ'ಯು ವಿಶೇಷ ಉಪಕ್ರಮವಾಗಿದ್ದು, ಬಡವರು ಮತ್ತು ನಿರ್ಗತಿಕರಿಗೆ ನೆರವಾಗಲು ಉದಾರ ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ.
ಹಬ್ಬದ ಆಧ್ಯಾತ್ಮಿಕ ಸಿದ್ಧತೆಯ ಭಾಗವಾಗಿ ಆಗಸ್ಟ್ 1 ರಿಂದ 9 ರವರೆಗೆ ಒಂಬತ್ತು ದಿನಗಳ ಕಾಲ ವಿಶೇಷ 'ನೊವೇನಾ' ಪ್ರಾರ್ಥನಾ ಕೂಟಗಳು ಜರುಗಲಿವೆ. ಆಗಸ್ಟ್ 1 ರಂದು ಬೆಳಿಗ್ಗೆ 10:00 ಗಂಟೆಗೆ ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ನೊವೆನಾಕ್ಕೆ ಚಾಲನೆ ನೀಡಲಿದ್ದಾರೆ. ಆಗಸ್ಟ್ 8 ರಂದು ಬ್ರದರ್ ಪ್ರಕಾಶ್ ಅವರ ನೇತೃತ್ವದಲ್ಲಿ ಸ್ತುತಿ, ಆರಾಧನೆ ಹಾಗೂ ರೋಗಿಗಳಿಗಾಗಿ ವಿಶೇಷ ಗುಣಪಡಿಸುವಿಕೆಯ ಪ್ರಾರ್ಥನೆ ನಡೆಯಲಿದೆ. ವಿಶೇಷವಾಗಿ ಆಗಸ್ಟ್ 9 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಥಮ ಬಾರಿಗೆ ಮಲಯಾಳಂ ಭಾಷೆಯಲ್ಲಿ ಪವಿತ್ರ ಬಲಿಪೂಜೆ ನೆರವೇರಲಿದೆ.
ಆಗಸ್ಟ್ 10 ರಂದು ಬೆಳಿಗ್ಗೆ 10:30 ಕ್ಕೆ ಮಂಗಳೂರಿನ ಬಿಷಪ್ ಗೌರವಾನ್ವಿತ ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರ ನೇತೃತ್ವದಲ್ಲಿ ಹಬ್ಬದ ಪ್ರಧಾನ ದಿವ್ಯ ಬಲಿಪೂಜೆ ಜರುಗಲಿದ್ದು, ಸಂಜೆ 5:30 ಕ್ಕೆ ಮೈಸೂರಿನ ಬಿಷಪ್ ಗೌರವಾನ್ವಿತ ಡಾ. ಫ್ರಾನ್ಸಿಸ್ ಸೆರಾವೊ ಅವರ ನೇತೃತ್ವದಲ್ಲಿ ಸಮಾರೋಪ ದಿವ್ಯಬಲಿಪೂಜೆ ನಡೆಯಲಿದೆ. ನೊವೇನಾ ದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ವೈದ್ಯಕೀಯ ಸೇವೆ, ಆಂಬ್ಯುಲೆನ್ಸ್ ಹಾಗೂ ವಿವಿಧ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಚರ್ಚ್‌ನ ರೆಕ್ಟರ್ ವಂದನೀಯ ಫಾ. ಬಾಸಿಲ್ ವಾಸ್ ಮತ್ತು ಪುಣ್ಯಕ್ಷೇತ್ರ ಸಮಿತಿಯ ಸಂಚಾಲಕರಾದ ಶ್ರೀ ಜೇಸನ್ ಫೆರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.