ಮಂಗಳೂರು: ಅತ್ಯಾಧುನಿಕ ಹಾಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ವಿಆರ್ ಹೆಲ್ತ್‌ಕೇರ್ ಸಂಸ್ಥೆಯು, ನೆರೆ ರಾಜ್ಯವಾದ ಕೇರಳದ ಕಾಸರಗೋಡಿನಲ್ಲಿ 'ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ'ವನ್ನು ಆರಂಭಿಸುವುದಾಗಿ ಮತ್ತು ತನ್ನ ಪ್ರಮುಖ ಸಮುದಾಯ ಆರೋಗ್ಯ ಕಾರ್ಯಕ್ರಮವಾದ 'ಆರೋಗ್ಯ ಬೈ ಆರ್‌ವಿಆರ್' ಅನ್ನು ದೇಶದಾದ್ಯಂತ ವಿಸ್ತರಿಸುವುದಾಗಿ ಆರ್‌ವಿಆರ್ ಹೆಲ್ತ್‌ಕೇರ್‌ನ ನಿರ್ದೇಶಕರಾಗಿರುವ ಡಾ. (ಪ್ರೊ.) ರಾಘವೇಂದ್ರ ಬಿ. ಎಸ್ ಘೋಷಿಸಿದರು.
ನಗರದ ದಿ ಓಶನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 2026ರ ಏಪ್ರಿಲ್ 24ರಂದು ಮಂಗಳೂರಿನಲ್ಲಿ ಕಾರ್ಯಾರಂಭ ಮಾಡಿದ ಆರ್‌ವಿಆರ್ ಹೆಲ್ತ್‌ಕೇರ್, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇರಿಸಿದೆ. ರೋಗಿಯ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ವಿಶ್ವಮಟ್ಟದ, ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವುದು ಆಸ್ಪತ್ರೆಯ ಮುಖ್ಯ ಧ್ಯೇಯವಾಗಿದೆ. ಸಂಸ್ಥೆಯ ವೈದ್ಯಕೀಯ ತಂಡವು 30 ವರ್ಷಗಳಿಗಿಂತ ಹೆಚ್ಚು ಸಂಯೋಜಿತ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಅನುಭವ ಹೊಂದಿದ್ದು, 17,000ಕ್ಕೂ ಅಧಿಕ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಪರಿಣತ ವೈದ್ಯರನ್ನು ಒಳಗೊಂಡಿದ್ದು, ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಆರ್‌ವಿಆರ್ ಹೆಲ್ತ್‌ಕೇರ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ವಿಜಯ್ ಎಂ. ಎನ್. ಶೆಟ್ಟಿ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಎಂದರು.
ಆರ್‌ವಿಆರ್ ಹೆಲ್ತ್‌ಕೇರ್‌ನ ನಿರ್ದೇಶಕರಾಗಿರುವ ಡಾ. (ಪ್ರೊ.) ರಾಘವೇಂದ್ರ ಬಿ. ಎಸ್. ಅವರು ದಕ್ಷಿಣ ಕನ್ನಡದ ಅತ್ಯಂತ ಹಿರಿಯ ಹಾಗೂ ಖ್ಯಾತ ನರಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾಗಿದ್ದಾರೆ. ಅವರ ಅಪಾರ ಅನುಭವ ಮತ್ತು ನೈತಿಕ ಮೌಲ್ಯಗಳ ಆಧಾರದಲ್ಲಿ ಸಂಸ್ಥೆಯು ಅತ್ಯುನ್ನತ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ಇದರೊಂದಿಗೆ ಹಿರಿಯ ಹೃದ್ರೋಗ ತಜ್ಞ ಡಾ. ಮನೀಶ್ ರೈ ಸೇರಿದಂತೆ ನರವಿಜ್ಞಾನ, ನರಶಸ್ತ್ರಚಿಕಿತ್ಸೆ ಹಾಗೂ ಆಂಕಾಲಜಿ ವಿಭಾಗಗಳ ಅನುಭವಿ ತಜ್ಞರ ತಂಡ ಸಂಸ್ಥೆಗೆ ಬಲ ತುಂಬಿದೆ.
ವಿಶೇಷ ವೈದ್ಯಕೀಯ ಸೇವೆಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜುಲೈ 27, 2026ರಂದು ಕೇರಳದ ಕಾಸರಗೋಡಿನಲ್ಲಿ 'ಆರ್‌ವಿಆರ್ ನ್ಯೂರೋ-ಆಂಕೊಲಜಿ ಕೇಂದ್ರ'ವು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಆರೋಗ್ಯ ಮೂಲಸೌಕರ್ಯಗಳು ಸೀಮಿತವಾಗಿರುವ ಪ್ರದೇಶಗಳಲ್ಲಿ ಅತ್ಯಾಧುನಿಕ ತಜ್ಞ ಚಿಕಿತ್ಸೆಯನ್ನು ಒದಗಿಸುವ ಸಲುವಾಗಿ ಈ ಕೇಂದ್ರವು ಕಾರ್ಯಾರಂಭ ಮಾಡುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ನರವಿಜ್ಞಾನ ಹಾಗೂ ಕ್ಯಾನ್ಸರ್ ತಜ್ಞರ ತಂಡದೊಂದಿಗೆ ಈ ಕೇಂದ್ರವು ನರವ್ಯವಸ್ಥೆಗೆ ಸಂಬಂಧಿಸಿದ ಸಂಕೀರ್ಣ ಕಾಯಿಲೆಗಳ ನಿರ್ಣಯ ಮತ್ತು ಚಿಕಿತ್ಸೆಗೆ ಸಮಗ್ರ ಸೇವೆ ಒದಗಿಸಲಿದೆ.
ಆರೋಗ್ಯ ಸೇವೆಯಿಂದ ವಂಚಿತವಾಗಿರುವ ಸಮುದಾಯಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ 'ಆರೋಗ್ಯ ಬೈ ಆರ್‌ವಿಆರ್' (AROGYA BY RVR) ಉಚಿತ ಆರೋಗ್ಯ ತಪಾಸಣೆ ಹಾಗೂ ತಜ್ಞ ವೈದ್ಯರ ಸಮಾಲೋಚನಾ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಯಶಸ್ಸಿನ ಹಿನ್ನೆಲೆಯಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕರ್ನಾಟಕ, ಕೇರಳ ಸೇರಿದಂತೆ ದೇಶದ ಇತರ ರಾಜ್ಯಗಳಿಗೂ ವಿಸ್ತರಿಸಲು ಸಂಸ್ಥೆ ಸಜ್ಜಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ಅಬು, ಡಾ. ವಿಘ್ನೇಶ್ ಸಂಪತ್ ಅಯ್ಯರ್, ವಿಜಯ್ ಎಂ. ಎನ್. ಶೆಟ್ಟಿ
ಡಾ. ಅಂಜನ್ ಕುಮಾರ್, ಶ್ರೀ ಅನಂತ್ ಎಸ್. ಎನ್ ಉಪಸ್ಥಿತರಿದ್ದರು..