image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯ ಮಟ್ಟದ ಮಲ್ಲಕಂಬ: ಆಳ್ವಾಸ್ ತಂಡಕ್ಕೆ ಸಮಗ್ರ ಚಾಂಪಿಯನ್ ಶಿಪ್

ರಾಜ್ಯ ಮಟ್ಟದ ಮಲ್ಲಕಂಬ: ಆಳ್ವಾಸ್ ತಂಡಕ್ಕೆ ಸಮಗ್ರ ಚಾಂಪಿಯನ್ ಶಿಪ್

ಮೂಡುಬಿದಿರೆ : ಕರ್ನಾಟಕ ಅಮೆಚೂರ್ ಮಲ್ಲಕಂಬ ಅಸೋಸಿಯೇಷನ್ ಲಕ್ಷ್ಮೇಶ್ವರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಮತ್ತು ಧಾರವಾಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಮಲ್ಲಕಂಬ ಕ್ರೀಡೋತ್ಸವದಲ್ಲಿ ಆಳ್ವಾಸ್ ಮಲ್ಲಕಂಬ ತಂಡವು ಎರಡೂ ಹಂತದ ಸ್ಪರ್ಧೆಗಳಲ್ಲೂ ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು 14 ವರ್ಷ ವಯೋಮಿತಿಯ ಬಾಲಕಿಯರು ಹಾಗೂ 14 ವರ್ಷ ಮೇಲ್ಪಟ್ಟ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಗುಂಪು ವಿಭಾಗದ ಹಗ್ಗ ಹಾಗೂ ಸ್ಥಿರ ಮಲ್ಲಕಂಬಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸಿತು. ವೈಯಕ್ತಿಕ ವಿಭಾಗದಲ್ಲಿ ವರ್ಷಿಣಿ (ಪ್ರಥಮ), ಸಿಂಚನಾ, ಪೂಜಾ, ಸವಿತಾ ಆರ್., ದಿವ್ಯ ಪಿ., ಆಕಾಶ್, ವಿನಾಯಕ್ (ಪ್ರಥಮ) ಹಾಗೂ ಸಂಗಪ್ಪ ವಿಜೇತರಾಗಿ ಹೊರಹೊಮ್ಮಿದರು. ಪಿರಮಿಡ್ ಸ್ಥಿರ ಮಲ್ಲಕಂಬ ವಿಭಾಗದಲ್ಲೂ ಪ್ರಥಮ ಸ್ಥಾನ ಲಭಿಸಿತು.

ಧಾರವಾಡ ಜಿಲ್ಲೆಯಲ್ಲಿ ನಡೆದ ಸ್ಪರ್ಧೆಯಲ್ಲೂ ಆಳ್ವಾಸ್ ತಂಡವು 14 ವರ್ಷ ವಯೋಮಿತಿಯ ಬಾಲಕಿಯರು ಹಾಗೂ 14 ವರ್ಷ ಮೇಲ್ಪಟ್ಟ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತು. ಗುಂಪು ವಿಭಾಗದ ಸ್ಥಿರ ಮತ್ತು ಹಗ್ಗದ ಮಲ್ಲಕಂಬ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಆಳ್ವಾಸ್, ವೈಯಕ್ತಿಕ ವಿಭಾಗದಲ್ಲೂ ಗಮನಾರ್ಹ ಸಾಧನೆ ಮಾಡಿತು. ಕವನ, ಸ್ಪೂರ್ತಿ, ದಿವ್ಯ (ಹಗ್ಗ ಮತ್ತು ಸ್ಥಿರ ಎರಡರಲ್ಲೂ ಪ್ರಥಮ), ನಿಂಗವ್ವ, ಆಕಾಶ್ (ಪ್ರಥಮ), ವಿನಾಯಕ್ (ಹಗ್ಗದಲ್ಲಿ ಪ್ರಥಮ, ಸ್ಥಿರದಲ್ಲಿ ದ್ವಿತೀಯ) ಹಾಗೂ ಸಂಗಮೇಶ್ ಪದಕ ಜಯಿಸಿ ತರಬೇತಿಗೆ ತಕ್ಕ ಪ್ರತಿಫಲ ತಂದಿತ್ತರು. ಒಟ್ಟು 120 ವಿದ್ಯಾರ್ಥಿಗಳನ್ನು ಒಳಗೊಂಡ ಈ ಆಳ್ವಾಸ್ ಮಲ್ಲಕಂಬ ತಂಡದ ಭವ್ಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Category
ಕರಾವಳಿ ತರಂಗಿಣಿ