ಮಂಗಳೂರು: ಮುಂದಿನ ತಲೆಮಾರಿಗೆ ತುಳುವನ್ನು ದಾಟಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತುಳು ಭಾಷೆಯ ಮೇಲೆ ಪ್ರೀತಿ ಮೂಡಿಸುವ ಹಾಗೂ ತುಳುವಿನ ಜ್ಞಾನವನ್ನು ಬಿತ್ತುವ ಕೆಲಸ ನಡೆಯಬೇಕಾಗಿದೆ ಎಂದು ಲೇಖಕಿ ಹಾಗೂ ತುಳು ಅಕಾಡೆಮಿಯ ಮಾಜಿ ಸದಸ್ಯೆ ರೂಪಕಲಾ ಆಳ್ವ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ತುಳು ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ 'ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ' ಸರಣಿಯ 15ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ವೇಣಿ ಮರೋಳಿ ಅವರು, ತಾವು 30 ವರ್ಷಗಳ ಕಾಲ ಗಲ್ಫ್ ದೇಶದಲ್ಲಿದ್ದ ಸಂದರ್ಭದಲ್ಲಿ ಸಕ್ರಿಯವಾಗಿ ತುಳು ಕಾರ್ಯಕ್ರಮವನ್ನು ನಡೆಸಿದ್ದನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಓದುವ ಸಲುವಾಗಿ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸುತ್ತಾರೆ ಹಾಗೂ ಆಸಕ್ತಿಯಿಂದ ಓದುತ್ತಾರೆ ಎಂದರು.
ಇದೇ ವೇಳೆ ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರಶಾಂತಿ ಶೆಟ್ಟಿ ಇರುವೈಲು ಶುಭ ಕೋರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಚಾಲಕರಾದ ದಶ್ವಿತ್ ಕೋಟ್ಯಾನ್ ಹಾಗೂ ಪ್ರಸ್ತುತಿ ಶೆಟ್ಟಿ ಉಪಸ್ಥಿತರಿದ್ದರು. ಸಂಜೆಯ ಸಮಾರೋಪದಲ್ಲಿ ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಬಗ್ಗೆ ವಿಚಾರ ವಿನಿಮಯ ನಡೆಸಿದರು. ತುಳು ಅಕಾಡೆಮಿಯ ಸದಸ್ಯ ಸಂಚಾಲಕ ಬೂಬ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.