image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ವಿವಿ ಪದವಿ ಪರೀಕ್ಷಾ ಫಲಿತಾಂಶ ಪ್ರಕಟ

ಮಂಗಳೂರು ವಿವಿ ಪದವಿ ಪರೀಕ್ಷಾ ಫಲಿತಾಂಶ ಪ್ರಕಟ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಜೂನ್-ಜುಲೈ 2026ರಲ್ಲಿ ನಡೆದ ವಿವಿಧ ಪದವಿ ಕೋರ್ಸ್‌ಗಳ 6ನೇ ಸೆಮಿಸ್ಟರ್ ಹಾಗೂ 8ನೇ ಸೆಮಿಸ್ಟರ್‌ನ ಮೌಲ್ಯಮಾಪನ ಪೂರ್ಣಗೊಂಡಿರುವ ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡಿವೆ. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹಾಗೂ ಕುಲಸಚಿವ ಸಂತೋಷ್ ಜಗಲಸಾರ ಅವರ ಉಪಸ್ಥಿತಿಯಲ್ಲಿ ಈ ಫಲಿತಾಂಶವನ್ನು ಬಿಡುಗಡೆ ಮಾಡಲಾಯಿತು.

ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿರುವ ಬಿ.ಎಸ್ಸಿ, ಬಿ.ಕಾಮ್, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ, ಬಿ.ಎಸ್ಸಿ (ಎಫ್.ಎನ್.ಡಿ), ಎಫ್.ಎನ್.ಡಿ (ಎನಿಮೇಷನ್ ಮತ್ತು ವಿಶುವಲ್ ಇಫೆಕ್ಟ್), ಬಿ.ಎಸ್ಸಿ (ಫುಡ್ ಟೆಕ್ನಾಲಜಿ), ಬಿ.ಎಸ್ಸಿ (ಹೋಮ್ ಸೈನ್ಸ್), ಬಿ.ಎ (ಎಚ್.ಆರ್.ಡಿ), ಬಿ.ಎಸ್ಸಿ (ಫ್ಯಾಷನ್ ಡಿಸೈನ್), ಬಿ.ಎಸ್ಸಿ (ಐ.ಡಿ ಆಂಡ್ ಡಿ), ಬಿ.ಎಸ್ಸಿ (ಎಚ್.ಎಸ್), ಬಿ.ಪಿ.ಎ ಕೋರ್ಸ್‌ಗಳ 6ನೇ ಸೆಮಿಸ್ಟರ್ ಹಾಗೂ ಬಿ.ಎಚ್.ಎಂ ಕೋರ್ಸ್‌ನ 8ನೇ ಸೆಮಿಸ್ಟರ್‌ನ ಮೌಲ್ಯಮಾಪನ ಕಾರ್ಯವು ಜುಲೈ 18ರಂದು ಪೂರ್ಣಗೊಂಡಿತ್ತು. ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಹಾಗೂ ಉದ್ಯೋಗದ ಹಿತದೃಷ್ಟಿಯಿಂದ, ಮೌಲ್ಯಮಾಪನ ಮುಗಿದ ಎರಡೇ ದಿನಗಳಲ್ಲಿ ಎಲ್ಲಾ ಆಂತರಿಕ, ಪ್ರಾಯೋಗಿಕ ಹಾಗೂ ಗ್ರೇಸ್ ಅಂಕಗಳನ್ನು ಪರಿಶೀಲಿಸಿ ಶೀಘ್ರವಾಗಿ ಫಲಿತಾಂಶ ಪ್ರಕಟಿಸಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 17,347 ವಿದ್ಯಾರ್ಥಿಗಳ ಪೈಕಿ 13,206 ವಿದ್ಯಾರ್ಥಿಗಳ ಫಲಿತಾಂಶವನ್ನು ಜುಲೈ 20 ರಂದು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ಯುಯುಸಿಎಮ್‌ಎಸ್ (UUCMS) ಪೋರ್ಟಲ್‌ನಲ್ಲಿ ತಮ್ಮ ಲಾಗಿನ್ ಐಡಿ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

6ನೇ ಸೆಮಿಸ್ಟರ್ ಮತ್ತು 8ನೇ ಸೆಮಿಸ್ಟರ್ (ಬಿ.ಎಚ್.ಎಂ) ಪರೀಕ್ಷೆಗಳು ಜೂನ್ 12ರಂದು ಪ್ರಾರಂಭಗೊಂಡು ಜುಲೈ 10ರಂದು ಮುಕ್ತಾಯಗೊಂಡಿದ್ದವು. ಜೂನ್ 29ರಿಂದ ನಾಲ್ಕು ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ಪ್ರಾರಂಭಗೊಂಡಿದ್ದು, ಪ್ರಸ್ತುತ ವಿವಿಧ ವಿಷಯಗಳ ಮೌಲ್ಯಮಾಪನ ಕಾರ್ಯ ಮುಂದುವರಿಯುತ್ತಿದೆ. ಇನ್ನು ಬಿ.ಎ (ಎಸ್.ಎಲ್.ಪಿ) 8ನೇ ಸೆಮಿಸ್ಟರ್, ಬಿ.ಎ/ಬಿ.ಬಿ.ಎ 6ನೇ ಸೆಮಿಸ್ಟರ್ ಹಾಗೂ ಜಿಲ್ಲಾ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್‌ಗಳು ಮತ್ತು ನಾನ್-ಎನ್‌ಇಪಿ (Non-NEP) ವಿಭಾಗದ ಪುನರಾವರ್ತಿತ-2 ವಿದ್ಯಾರ್ಥಿಗಳ ಫಲಿತಾಂಶಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.

ವಿಶ್ವವಿದ್ಯಾನಿಲಯವು ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕಗಳ ದಾಖಲೀಕರಣ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಪೂರಕವಾಗಿ ಮೌಲ್ಯಮಾಪನ ಕೇಂದ್ರಗಳ ಕಸ್ಟೋಡಿಯನ್, ಸಂಯೋಜಕರು, ಪರೀಕ್ಷಾ ಮಂಡಳಿ ಅಧ್ಯಕ್ಷರು, ಮೌಲ್ಯಮಾಪಕರು ಹಾಗೂ ಪರೀಕ್ಷಾಂಗ ವಿಭಾಗದ ಸಿಬ್ಬಂದಿಯ ಪೂರ್ಣಪ್ರಮಾಣದ ಸಹಕಾರದಿಂದ ನಿಗದಿತ ಸಮಯದಲ್ಲಿ ಮೌಲ್ಯಮಾಪನ ಪೂರ್ಣಗೊಂಡಿದೆ. ಉಳಿದ ಎಲ್ಲಾ ಫಲಿತಾಂಶಗಳು ಪ್ರಕಟವಾದ ನಂತರ ಮರುಮೌಲ್ಯಮಾಪನಕ್ಕೆ ಯುಯುಸಿಎಮ್‌ಎಸ್‌ನಲ್ಲಿ ತಕ್ಷಣ ಅರ್ಜಿ ಆಹ್ವಾನಿಸಲಾಗುವುದು. ಇಚ್ಛಿಸುವ ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಎಚ್. ದೇವೀಂದ್ರಪ್ಪ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

Category
ಕರಾವಳಿ ತರಂಗಿಣಿ