image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಕ್ಕುಗಳ ಮೇಲೆ ಪ್ರಹಾರವಾದಾಗ ಸಾಹಿತಿಗಳು ಧ್ವನಿ ಎತ್ತಬೇಕು: ಎಂ.ಪಿ. ನೊರೊನಾ

ಹಕ್ಕುಗಳ ಮೇಲೆ ಪ್ರಹಾರವಾದಾಗ ಸಾಹಿತಿಗಳು ಧ್ವನಿ ಎತ್ತಬೇಕು: ಎಂ.ಪಿ. ನೊರೊನಾ

ಮಂಗಳೂರು : ಜನರ ಹಕ್ಕುಗಳ ಮೇಲೆ ಪ್ರಹಾರಗಳು ನಡೆದಾಗ ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಮೊದಲು ಸ್ಪಂದಿಸಿ, ಧ್ವನಿ ಎತ್ತಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಅಭಿಯೋಜಕ ಎಂ.ಪಿ. ನೊರೊನಾ ಹೇಳಿದರು. ಇಲ್ಲಿನ ಬಲ್ಮಠದ ಸಹೋದಯ ಸಭಾಗೃಹದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಐದನೇ ಚಾರೊಳಿ ಸಾಹಿತ್ಯ ಸಮ್ಮೇಳನವನ್ನು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯದ ವಿವಿಧ ಪ್ರಕಾರಗಳು ಸಮಾಜದ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಜನರ ಮನಸ್ಸಿನಲ್ಲಿರುವ ದ್ವಂದ್ವಗಳನ್ನು ನಿವಾರಿಸಿ ಹೊಸ ಆಲೋಚನೆಗಳನ್ನು ಮೂರ್ತ ರೂಪಕ್ಕೆ ತರುವ ಶಕ್ತಿ ಸಾಹಿತ್ಯಕ್ಕಿದೆ ಎಂದರು. ಇದೇ ಸಂದರ್ಭದಲ್ಲಿ ಮಂಗಳೂರಿನ ಅರುಂಧತಿ ವಿ. ರಾವ್ ಹಾಗೂ ಗೋವಾದ ಅನ್ನಿ ದೆ ಕೊಲ್ವಾಲೆ ಅವರಿಗೆ ‘ರಾಷ್ಟ್ರೀಯ ಚಾರೊಳಿ ಸಾಹಿತ್ಯ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಸಮ್ಮೇಳನದ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ದುಬೈ, ಬೆಂಗಳೂರು ಹಾಗೂ ಕಾರವಾರದ ಕೊಂಕಣಿ ಕವಿಗಳು ವಿವಿಧ ಲಿಪಿ ಮತ್ತು ಉಪಭಾಷೆಗಳಲ್ಲಿ ಬರೆಯುತ್ತಿದ್ದು, ಅವರೆಲ್ಲರೂ ಇಲ್ಲಿ ಒಂದೆಡೆ ಸೇರಿರುವುದು ಭಾರತದ ‘ವೈವಿಧ್ಯತೆಯಲ್ಲಿ ಏಕತೆ’ಯ ಕೊಂಕಣಿ ಸಂಭ್ರಮವಾಗಿದೆ ಎಂದರು. ಗೋವಾದ ಹಿರಿಯ ಕೊಂಕಣಿ ಕವಿ ಗೌರಿಶ್ ವರ್ಣೇಕರ್ ಕವಿಗೋಷ್ಠಿಗೆ ಚಾಲನೆ ನೀಡಿ ಸಂಚಾಲನೆ ಮಾಡಿದರು. ಸೇಂಟ್ ಆನ್ಸ್ ಫ್ರೈರಿಯ ಸುಪೀರಿಯರ್ ಫಾ. ಜೆರಾಲ್ಡ್ ಲೋಬೊ ಪ್ರಾರ್ಥನೆ ನಡೆಸಿಕೊಟ್ಟರು. ಫೋರ್‌ವಿಂಡ್ಸ್ ಸಂಸ್ಥೆಯ ಮಾಲೀಕ ಎಲಿಯಾಸ್ ಫರ್ನಾಂಡೀಸ್ ವೇದಿಕೆಯಲ್ಲಿದ್ದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಕಾರ್ಯಾಚರಿಸುವ ಪತ್ರಕರ್ತರ ಸಂಘದ ದ.ಕ. ಪ್ರತಿನಿಧಿ ಶ್ರೀನಿವಾಸ ನಾಯಕ್ ಇಂದಾಜೆ ಕವಿಗಳಿಗೆ ಸನ್ಮಾನ ಪತ್ರ ಹಾಗೂ ಪದಕ ವಿತರಿಸಿದರು. ಯೋಗಿತಾ ವರ್ಣೇಕರ್ ಸಮಾರೋಪ ಭಾಷಣ ಮಾಡಿದರು. ಸಂತ ಅಲೋಶಿಯಸ್ ಕಾಲೇಜು ಹಾಗೂ ಗೋವಾದ ವಿದ್ಯಾರ್ಥಿಗಳು ಸಾಹಿತಿಗಳೊಂದಿಗೆ ಸಾಹಿತ್ಯವನ್ನು ಬೆಳೆಸುವ ಮತ್ತು ಉಳಿಸುವ ಕುರಿತು ವಿಚಾರ ವಿನಿಮಯ ನಡೆಸಿದರು. ಹಿರಿಯ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿದರು. ಪತ್ರಕರ್ತೆ ರಿಯಾನಾ ಡಿಕೂನಾ ವಂದಿಸಿದರು. ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕಿ ನತಾಲಿಯಾ ಡಿಕೂನಾ ಕಾರ್ಯಕ್ರಮ ನಿರೂಪಿಸಿದರು. ಜೋನ್ ತಾವ್ರೊ, ಸ್ಟೇನಿ ತಾವ್ರೊ, ಲೊನಾ ವಾಸ್, ವಿರೊಯ್ ಡೆಸಾ ಹಾಗೂ ಹೆರಾಲ್ಡ್ ಅಲ್ಬುಕರ್ಕ್ ಕಾರ್ಯಕ್ರಮಕ್ಕೆ ಸಹಕರಿಸಿದರು.

Category
ಕರಾವಳಿ ತರಂಗಿಣಿ