image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬನ್ನಡ್ಕ ಸರ್ವೀಸ್ ರಸ್ತೆ, ವಾಮಂಜೂರು ಕಾಲ್ಸೇತುವೆಗೆ NHAI ತಾತ್ವಿಕ ಒಪ್ಪಿಗೆ

ಬನ್ನಡ್ಕ ಸರ್ವೀಸ್ ರಸ್ತೆ, ವಾಮಂಜೂರು ಕಾಲ್ಸೇತುವೆಗೆ NHAI ತಾತ್ವಿಕ ಒಪ್ಪಿಗೆ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ಕಾಮಗಾರಿ ವ್ಯಾಪ್ತಿಯ ಬನ್ನಡ್ಕದಲ್ಲಿ ಸರ್ವೀಸ್ ರಸ್ತೆ ಹಾಗೂ ವಾಮಂಜೂರಿನಲ್ಲಿ ಪಾದಚಾರಿ ಮೇಲ್ಸೇತುವೆ നിർಮಾಣ ಸೇರಿದಂತೆ ಒಟ್ಟು ₹5.83 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ತಾತ್ವಿಕ ಅನುಮೋದನೆ ನೀಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಯೋಜನೆಯಡಿ ಬನ್ನಡ್ಕ ಪ್ರದೇಶದಲ್ಲಿ ಕೈಬಿಡಲಾಗಿದ್ದ 700 ಮೀಟರ್ ಸರ್ವೀಸ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಬಾಕ್ಸ್ ಕಲ್ವರ್ಟ್‌ಗಳ ಅಗಲೀಕರಣ ಕಾಮಗಾರಿಗಳಿಗೆ ₹4.12 ಕೋಟಿ ಮೀಸಲಿಡಲಾಗಿದೆ. ಇದರೊಂದಿಗೆ ವಾಮಂಜೂರು ಚರ್ಚ್, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರು ಸುರಕ್ಷಿತವಾಗಿ ರಸ್ತೆ ದಾಟಲು ವಾಮಂಜೂರು ಸಮೀಪ ₹1.70 ಕೋಟಿ ವೆಚ್ಚದಲ್ಲಿ ನೂತನ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುವುದು. ಈ ಸಂಬಂಧ NHAI ಬೆಂಗಳೂರು ಪ್ರಾದೇಶಿಕ ಕಚೇರಿಯು ಗುತ್ತಿಗೆ ಸಂಸ್ಥೆಯಾದ 'ದಿಲೀಪ್ ಬಿಲ್ಡ್‌ಕಾನ್'ಗೆ ಅಧಿಕೃತವಾಗಿ ಪತ್ರ ರವಾನಿಸಿದೆ.

ಅಂತಿಮ ಸಿಒಎಸ್ ಆದೇಶ ಹೊರಡಿಸಲು ಮತ್ತು ಕಾಮಗಾರಿ ತಕ್ಷಣವೇ ಆರಂಭಿಸಲು ಸವಿಸ್ತಾರವಾದ ಅಂದಾಜು ವೆಚ್ಚ ಹಾಗೂ ವಿನ್ಯಾಸಗಳ ನಕ್ಷೆಯನ್ನು ಸಲ್ಲಿಸುವಂತೆ ಗುತ್ತಿಗೆ ಸಂಸ್ಥೆಗೆ ನಿರ್ದೇಶಿಸಲಾಗಿದೆ. ತಾಂತ್ರಿಕ ನಕ್ಷೆಗಳ ಪರಿಶೀಲನೆ ಪೂರ್ಣಗೊಂಡ ತಕ್ಷಣ ಸ್ಥಳದಲ್ಲಿ ನಿರ್ಮಾಣ ಕಾರ್ಯ ಚುರುಕುಗೊಳ್ಳಲಿದ್ದು, ಸುದೀರ್ಘ ದಿನಗಳಿಂದ ಎದುರಾಗುತ್ತಿದ್ದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಬನ್ನಡ್ಕದಲ್ಲಿ ಸರ್ವೀಸ್ ರಸ್ತೆ ಇಲ್ಲದೆ ಸರಣಿ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಸ್ಥಳೀಯರಿಂದ ಬಂದ ದೂರಿಗೆ ಸ್ಪಂದಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರು ಸ್ಥಳ ಪರಿಶೀಲನೆ ನಡೆಸಿ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ತುರ್ತು ಕ್ರಮಕ್ಕೆ ಮನವಿ ಮಾಡಿದ್ದರು.

Category
ಕರಾವಳಿ ತರಂಗಿಣಿ