ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳೂರು ಪತ್ರಿಕಾ ಭವನದಲ್ಲಿ ಜುಲೈ 21ರಂದು ಮಂಗಳವಾರದಂದು ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಆನಂದ ಶೆಟ್ಟಿ ಅಡ್ಯಾರ್ ವಹಿಸಿ ಮಾತನಾಡಿ, ಯಾವುದೇ ಪತ್ರಿಕೆ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ, ಅದು ಸಮಾಜದ ಧ್ವನಿ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯಾಗಿದೆ. ಕಳೆದ 13 ವರ್ಷಗಳಿಂದ ಅಮೃತ ಪ್ರಕಾಶ ಪತ್ರಿಕೆ ಸಮಾಜಮುಖಿ ವಿಚಾರಗಳು, ಮಹಿಳಾ ಸಬಲೀಕರಣ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದೆ ಎಂದು ಪ್ರಶಂಸಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಅಮೃತ ಪ್ರಕಾಶ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುದೀರ್ಘ 13 ವರ್ಷಗಳಿಂದ ಗುಣಮಟ್ಟದ ಮೌಲ್ಯಯುತ ಪತ್ರಿಕೆಯನ್ನು ಸಮಾಜಕ್ಕೆ ನೀಡುತ್ತಾ ನಿರಂತರ ಸಾಹಿತ್ಯ ಸೇವೆ ಮಾಡುತ್ತಿರುವ ಡಾ. ಮಾಲತಿ ಶೆಟ್ಟಿ ಮಾಣೂರು ಅವರ ಕೆಲಸ ಅತ್ಯಂತ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಸಿದ್ಧ ಸಮಾಜ ಸೇವಕಿ ಹಾಗೂ ಉದ್ಯಮಿ ಲಯನ್ ಆಶಾ ರಾವ್ ಆರೂರು ಉಪಸ್ಥಿತರಿದ್ದರು.
ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಎಲ್ಲರನ್ನು ಸ್ವಾಗತಿಸಿದರು. ಲೇಖಕಿ ಹಾಗೂ ಶಿಕ್ಷಕಿ ಸುರೇಖಾ ಯಾಳವಾರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.