ಉಪ್ಪಿನಂಗಡಿ : ಉಪ್ಪಿನಂಗಡಿ ಭಾಗದ ಜನರ ಬಹುವರ್ಷದ ಬೇಡಿಕೆಯಾಗಿದ್ದ ಬಜತ್ತೂರು ಕೆಪಿಎಸ್ ಶಾಲೆಗೆ 10 ಕೋಟಿ ರೂ. ಹಾಗೂ ಅಂಬೇಡ್ಕರ್ ವಸತಿ ಶಾಲೆಗೆ 22 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈ ಯೋಜನೆಗಳನ್ನು ಸಾರ್ವಜನಿಕರು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಕರೆ ನೀಡಿದ್ದಾರೆ. ಬಜತ್ತೂರು ಗ್ರಾಮದ ಬಿದಿರಾಡಿಯಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ವಿದ್ಯೆ ಇಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಇಡೀ ಕುಟುಂಬ, ರಾಜ್ಯ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕರು ಇದೇ ವೇಳೆ ಪ್ರತಿಪಾದಿಸಿದರು. ವಸತಿ ಶಾಲೆಗೆ ಮೀಸಲಿಟ್ಟ ಜಾಗದಲ್ಲಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ತಕರಾರು ಇತ್ತು. ಇದನ್ನು ನಿವಾರಿಸಲು ಸಾಕಷ್ಟು ಶ್ರಮವಹಿಸಬೇಕಾಯಿತು. ಕೊನೆಗೂ ಅಂದಿನ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಸ್ವತಃ ಕಡತವನ್ನು ತರಿಸಿಕೊಂಡು ಆದೇಶ ಮಾಡುವ ಮೂಲಕ ಈ ಯೋಜನೆಗೆ ಎದುರಾಗಿದ್ದ ದೊಡ್ಡ ವಿಘ್ನವನ್ನು ನಿವಾರಿಸಿಕೊಟ್ಟರು ಎಂದು ಅವರು ನೆನೆದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸಿಫ್, ವಲಯಾಧ್ಯಕ್ಷ ವಿನೋದ್ ಕುಮಾರ್, ಬಜತ್ತೂರು ಪಿಡಿಒ ಚಿತ್ರಾವತಿ, ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಮಠದ, ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದವರನ್ನು ಪ್ರಾಂಶುಪಾಲ ಸತೀಶ್ ಸ್ವಾಗತಿಸಿ, ನಿರೂಪಿಸಿದರು. ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮುರಳೀಧರ ಹಾಗೂ ಶಿಕ್ಷಕರಾದ ಕೃಷ್ಣಕುಮಾರ್ ಮತ್ತು ವಸಂತ ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.