image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ಕಾಲೇಜಿನಲ್ಲಿ ಪಿಎಚ್‌ಡಿ, ಸ್ನಾತಕೋತ್ತರ ಹಾಗೂ ಪದವಿ ಕೋರ್ಸ್‌ಗಳ ಉದ್ಘಾಟನೆ

ಫಾದರ್ ಮುಲ್ಲರ್ ಕಾಲೇಜಿನಲ್ಲಿ ಪಿಎಚ್‌ಡಿ, ಸ್ನಾತಕೋತ್ತರ ಹಾಗೂ ಪದವಿ ಕೋರ್ಸ್‌ಗಳ ಉದ್ಘಾಟನೆ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ (FMCI) ಅಂಗಸಂಸ್ಥೆಯಾದ ಫಾದರ್ ಮುಲ್ಲರ್ ಕಾಲೇಜಿನಲ್ಲಿ 2026-2027ರ ಶೈಕ್ಷಣಿಕ ಸಾಲಿನ ಬಿಎಸ್‌ಎಲ್‌ಪಿ (BASLP) 20ನೇ ಬ್ಯಾಚ್, ಎಂ.ಎಸ್ಸಿ ಆಡಿಯಾಲಜಿ ಹಾಗೂ ಎಂ.ಎಸ್ಸಿ ಸ್ಪೀಚ್ ಲ್ಯಾಂಗ್ವೇಜ್ ಪ್ಯಾರಾಥಾಲಜಿಯ 7ನೇ ಬ್ಯಾಚ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾರಾಥಾಲಜಿ ವಿಭಾಗದ ಪ್ರಥಮ ಪಿಎಚ್.ಡಿ (Ph.D) ಬ್ಯಾಚ್‌ನ ಉದ್ಘಾಟನಾ ಸಮಾರಂಭ ಜುಲೈ 20 ರಂದು ಜ್ಞಾನ ಕೇಂದ್ರದ ದಶಮಾನೋತ್ಸವ ಸಭಾಂಗಣದಲ್ಲಿ ನೆರವೇರಿತು. ಈ ಕಾರ್ಯಕ್ರಮವು ಸಂಸ್ಥೆಯ 'ದ್ವಿದಶಮಾನೋತ್ಸವ ವರ್ಷ'ದ (2007–2027) ಸಂಭ್ರಮದ ಶುಭಾರಂಭಕ್ಕೂ ಸಾಕ್ಷಿಯಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿಂಥಿಯಾ ಸಂತಮಾಯೋರ್ ಅವರು ಹೊಸ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸ್ವಾಗತಿಸಿದರು.

ಎಫ್‌ಎಮ್‌ಸಿಐ ನಿರ್ದೇಶಕರಾದ ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಮತ್ತು ಗಣ್ಯರು ಡಿಜಿಟಲ್ ಬಟನ್ ಒತ್ತುವ ಮೂಲಕ ವಿಸೆನ್ನಿಯಲ್ (ದ್ವಿದಶಮಾನೋತ್ಸವ) ವರ್ಷದ ಆಚರಣೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಿಶೇಷ ಆಡಿಯೋ-ವಿಶುವಲ್ ಪ್ರಸ್ತುತಿಯು, ಕಾಲೇಜು ಪದವಿ ಶಿಕ್ಷಣದಿಂದ ಸ್ನಾತಕೋತ್ತರ ಹಾಗೂ ಪಿಎಚ್.ಡಿ ಹಂತಕ್ಕೆ ಬೆಳೆದು ಬಂದ 20 ವರ್ಷಗಳ ಶೈಕ್ಷಣಿಕ, ಸಂಶೋಧನಾ ಮತ್ತು ಸಾಮಾಜಿಕ ಸೇವೆಯ ಪಯಣವನ್ನು ಅನಾವರಣಗೊಳಿಸಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂತ ಅಲೋಶಿಯಸ್ (ಪರಿಭಾವಿತ ವಿಶ್ವವಿದ್ಯಾಲಯ) ನೋಂದಣಾಧಿಕಾರಿ ಡಾ. ರೊನಾಲ್ಡ್ ಆಕ್ವಿನ್ ನಜರೆತ್ ಅವರು ಮಾತನಾಡಿ, ವಿದ್ಯಾರ್ಥಿಗಳು ಕರುಣೆ, ಶ್ರಮ, ಪ್ರಾಮಾಣಿಕತೆ ಹಾಗೂ ವೃತ್ತಿಪರ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪೋಲಿಯೋ ಪೀಡಿತ ಮಕ್ಕಳಿಗಾಗಿ ಹಗುರವಾದ ಕ್ಯಾಲಿಪರ್‌ಗಳನ್ನು ರೂಪಿಸಿದ್ದನ್ನು ತಮ್ಮ ಜೀವನದ ಅತ್ಯಂತ ತೃಪ್ತಿದಾಯಕ ಸಾಧನೆ ಎಂದು ಪರಿಗಣಿಸಿದ್ದನ್ನು ಸ್ಮರಿಸಿದ ಅವರು, ಜ್ಞಾನವನ್ನು ಸಮಾಜ ಸೇವೆಯ ಕರುಣೆಯೊಂದಿಗೆ ಬಳಸಿದಾಗ ಮಾತ್ರ ಅದಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು. ಇದೇ ವೇಳೆ ಮುಖ್ಯ ಅತಿಥಿಗಳನ್ನು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾದರ್ ಜಾರ್ಜ್ ಜೀಸಸ್ ಸಿಕ್ವೇರಾ ಸ್ಮರಣಿಕೆ ನೀಡಿ ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಂಸ್ಥೆಯ ನಿರಂತರ ಬೆಳವಣಿಗೆಯನ್ನು ಮೆಚ್ಚಿದರು ಹಾಗೂ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳೊಂದಿಗೆ ಸಮಾಜ ಸೇವೆಗೆ ಶ್ರಮಿಸಬೇಕೆಂದು ಕರೆ ನೀಡಿದರು. ಆಡಿಯಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಪಂಚಮ್ ಪೊನ್ನಣ್ಣ ವಂದಿಸಿದರು. ಮೆಲಿಷಿಯಾ ಶೈನಿ ಡಿಸೋಜ ಮತ್ತು ಹ್ಯಾಡ್ಲಿನ್ ರಿಚೆಲ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ