ಮೂಡುಬಿದಿರೆ : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಇದನ್ನು ದಸರಾ ಕಾರ್ಯಸೂಚಿಗೆ ಸೇರಿಸಲಾಗಿದೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಜಿಲ್ಲಾ ಕಂಬಳ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಮುಂಬರುವ ಅಕ್ಟೋಬರ್ 18 ಮತ್ತು 19ರಂದು ಮೈಸೂರು ದಸರಾ ಕಂಬಳ ನಡೆಸುವ ಉದ್ದೇಶವಿದ್ದು, ಕಂಬಳ ಯಜಮಾನರ ಅಭಿಪ್ರಾಯವನ್ನು ಪಡೆದು ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮೂಡುಬಿದಿರೆಯ ಸೃಷ್ಟಿ ಗಾರ್ಡನ್‌ನಲ್ಲಿ ಭಾನುವಾರ ನಡೆದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಕಂಬಳ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಚಂದ್ರಹಾಸ ಸಾದು ಸನಿಲ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 29 ಕಂಬಳಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ತಲಾ 5 ಲಕ್ಷ ರೂ. ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಕ್ರೀಡಾ ಇಲಾಖೆಯಿಂದ 2 ಲಕ್ಷ ರೂ. ಅನುದಾನ ಮಂಜೂರಾಗಿದೆ. ಇದರೊಂದಿಗೆ ಕಂಬಳದ ತೀರ್ಪುಗಾರರು ಹಾಗೂ ಪರಿಚಾರಕರಿಗೆ ವಿಶೇಷ ಕಾರ್ಮಿಕ ಕಾರ್ಡ್ ವಿತರಿಸುವ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಚಂದ್ರಹಾಸ ಸಾದು ಸನಿಲ್ ಅವರು, ಕಂಬಳ ಕೂಟಗಳನ್ನು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಈ ಬಾರಿ 150 ಜೊತೆ ಕೋಣಗಳಿರುವ ಕಂಬಳವನ್ನು 24 ಗಂಟೆಯೊಳಗೆ ಹಾಗೂ ಅದಕ್ಕಿಂತ ಹೆಚ್ಚಿನ ಕೋಣಗಳಿರುವ ಕಂಬಳವನ್ನು 30 ಗಂಟೆಯೊಳಗೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಕಂಬಳವು ಮರುದಿನ ಬೆಳಿಗ್ಗೆ 9 ಗಂಟೆಯೊಳಗೆ ಮುಕ್ತಾಯವಾದರೆ ಮಾತ್ರ ಸರ್ಕಾರಿ ಅನುದಾನಕ್ಕೆ ಅರ್ಹತೆ ದೊರೆಯಲಿದೆ. ಈ ವರ್ಷ ನಾಲ್ಕು ಹೊಸ ಕಂಬಳಗಳು ಸೇರ್ಪಡೆಯಾಗುತ್ತಿದ್ದು, ಎಲ್ಲ ಕಂಬಳ ನಡೆಯುವ ಸ್ಥಳಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಅಲ್ಲದೆ, ತೀರ್ಪುಗಾರರು ಕಡ್ಡಾಯವಾಗಿ ಜಿಲ್ಲಾ ಕಂಬಳ ಸಮಿತಿಯ ಸದಸ್ಯತ್ವ ಪಡೆದು ಮತದಾನದ ಹಕ್ಕನ್ನು ಹೊಂದಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಅವರು ಮಾತನಾಡಿ, ಉತ್ತಮ ಯೋಜನೆ ಹಾಗೂ ಸಮನ್ವಯತೆಯೊಂದಿಗೆ ಕಂಬಳವನ್ನು ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸಬೇಕು ಎಂದು ಸಲಹೆ ನೀಡಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ, ಜಿಲ್ಲಾ ಸಮಿತಿಯ ಗೌರವ ಸಲಹೆಗಾರ ಕೊಳಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಕೊಳಕ್ಕೆ ಇರ್ವತ್ತೂರು ಭಾಸ್ಕರ್ ಕೋಟ್ಯಾನ್, ಎರ್ಮಳ್ ರೋಹಿತ್ ಹೆಗ್ಡೆ, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ರೆಂಜಾಳ ವಿದ್ಯಾಧರ್ ಜೈನ್, ಕೋಶಾಧಿಕಾರಿ ಸಂದೀಪ್ ಶೆಟ್ಟಿ, ಉಪಾಧ್ಯಕ್ಷರಾದ ಮಲ್ಲಿಕಾ ಯಶವಂತ ಶೆಟ್ಟಿ, ರಶ್ಮಿತ್ ಶೆಟ್ಟಿ, ಉದಯ ಶೆಟ್ಟಿ ಕಾಂತಾವರ, ಬೋಳಾದ ತ್ರಿಶಾಲ್ ಕೆ. ಪೂಜಾರಿ, |ಮಿಜಾರು ಶಕ್ತಿಪ್ರಸಾದ್ ಶೆಟ್ಟಿ ಇರುವೈಲು, ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಗಿರೀಶ್ ಆಳ್ವ, ಜೊತೆ ಕಾರ್ಯದರ್ಶಿ ಬೆಳ್ಳಿಪಾಡಿ ಕೃಪ ಕೇಶವ ಭಂಡಾರಿ ಹಾಗೂ ತೀರ್ಪುಗಾರರ ಸಂಚಾಲಕ ಸುಧೀಶ್ ಕುಮಾರ್ ಆರಿಗ ಬಂಗಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.