ಧರ್ಮಸ್ಥಳ : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತೀವ್ರ ವಿಷಾದ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ. ಚೆನ್ನಮ್ಮ ಅವರು ಧರ್ಮಸ್ಥಳದ ಅಪಾರ ಅಭಿಮಾನಿ ಹಾಗೂ ಭಕ್ತರಾಗಿದ್ದರು ಎಂದು ಸ್ಮರಿಸಿರುವ ಅವರು, ಪ್ರತಿ ವರ್ಷವೂ ಸಕುಟುಂಬಿಕರಾಗಿ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು ಸೇವೆ ಮಾಡುತ್ತಿದ್ದರು. ಅವರ ಮನೆದೇವರು ಕೂಡ "ಶಿವ" ಆಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ಹೆಗ್ಗಡೆಯವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೋರಿರುವ ಡಾ. ವೀರೇಂದ್ರ ಹೆಗ್ಗಡೆಯವರು, ಈ ಅಗಲುವಿಕೆಯಿಂದ ದೇವೇಗೌಡರ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ ಹಾಗೂ ತಾಳ್ಮೆಯನ್ನು ಶ್ರೀ ಮಂಜುನಾಥ ಸ್ವಾಮಿಯು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.