image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿವಿಧ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗೆ ಐವನ್ ಡಿ'ಸೋಜಾ ಒತ್ತಾಯ

ವಿವಿಧ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗೆ ಐವನ್ ಡಿ'ಸೋಜಾ ಒತ್ತಾಯ

ಮಂಗಳೂರು : ಮಂಗಳೂರು ನಗರದ ಉರ್ವಾ ಸ್ಟೋರ್ ಸಮೀಪದ ಸುಂಕದಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ'ಸೋಜಾ ಅವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದಾರೆ. ನಿರಂತರ ಮಳೆಯಾಗುತ್ತಿದ್ದರೂ ರಾತ್ರಿ 12 ರಿಂದ ಬೆಳಿಗ್ಗೆ 6 ಗಂಟೆಯೊಳಗೆ ಮಾತ್ರ ರೇಷನಿಂಗ್ ಪದ್ಧತಿಯಲ್ಲಿ ಕಡಿಮೆ ಒತ್ತಡದ ಬೋರ್‌ವೆಲ್ ನೀರು ಪೂರೈಕೆಯಾಗುತ್ತಿದ್ದು, ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ. ಈ ಕುರಿತು ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿದ ಐವನ್ ಡಿ'ಸೋಜಾ ಅವರು, ನಿವಾಸಿಗಳಿಗೆ ಸಾಧ್ಯವಾದಷ್ಟು 24 ಗಂಟೆಗಳ ನಿರಂತರ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನೀರಿನ ಟ್ಯಾಂಕ್ ವ್ಯವಸ್ಥೆ ಇಲ್ಲದ ಬಡ ಕುಟುಂಬಗಳಿಗೆ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ವಿತರಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ಮತ್ತು ಶಾಶ್ವತ ಪರಿಹಾರಕ್ಕಾಗಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸ್ಥಳೀಯ ಮುಖಂಡ ಚೇತನ್ ಉರ್ವಾ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಮತ್ತೊಂದೆಡೆ, ಉರ್ವಾ ಅಶೋಕನಗರದಲ್ಲಿರುವ ಅಶೋಕ ಪ್ಯಾರಡೈಸ್ ಅಪಾರ್ಟ್‌ಮೆಂಟ್ ಪಕ್ಕದ ಮಳೆನೀರು ಹರಿಯುವ ತೋಡು ತೀವ್ರ ನೀರಿನ ಒತ್ತಡದಿಂದಾಗಿ ಕುಸಿತಗೊಂಡು ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಗೋಡೆಗೂ ಹಾನಿಯಾಗಿದೆ. ಸಾರ್ವಜನಿಕರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಐವನ್ ಡಿ'ಸೋಜಾ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು. ತಕ್ಷಣವೇ ಸ್ಯಾಂಡ್‌ಬ್ಯಾಗ್‌ಗಳನ್ನು ಅಳವಡಿಸುವ ಮೂಲಕ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಶಾಶ್ವತ ತಡೆಗೋಡೆ ಹಾಗೂ ತೋಡು ದುರಸ್ತಿ ಕಾಮಗಾರಿಗೆ ಅಗತ್ಯವಿರುವ ಅಂದಾಜು ವೆಚ್ಚವನ್ನು ತಕ್ಷಣ ಸಿದ್ಧಪಡಿಸಬೇಕು ಎಂದು ಸಂಬಂಧಪಟ್ಟ ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳಿಗೆ ಹಾಗೂ ಅಧಿಕಾರಿಗಳಿಗೆ ಅವರು ತಕ್ಷಣದ ಇಂಜಿನಿಯರಿಂಗ್ ಕ್ರಮಗಳಿಗಾಗಿ ನಿರ್ದೇಶನ ನೀಡಿದರು.

ಇದಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎನ್ಯುಮರೇಷನ್ ಪ್ರಕ್ರಿಯೆಯಲ್ಲಿ ಕಂಡುಬರುತ್ತಿರುವ ಅಕ್ರಮಗಳು ಮತ್ತು ಅವ್ಯವಸ್ಥೆಗಳ ಕುರಿತು ಐವನ್ ಡಿ'ಸೋಜಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಕೆಲವು ಕಡೆಗಳಲ್ಲಿ ರಾಜಕೀಯ ವ್ಯಕ್ತಿಗಳು ಹಳೆಯ ಮತದಾರರ ಪಟ್ಟಿಯನ್ನು ಬಳಸಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಮತ್ತು ಬಿ.ಎಲ್.ಓ.ಗಳು ಮನೆ-ಮನೆಗೆ ಭೇಟಿ ನೀಡದೆ ಕೇವಲ ಫಾರಂಗಳನ್ನು ವಿತರಿಸುತ್ತಿದ್ದಾರೆ ಎಂದು ನಿಯೋಗ ಆರೋಪಿಸಿದೆ. ಯಾವುದೇ ಅರ್ಹ ಮತದಾರರು ನೋಂದಣಿಯಿಂದ ವಂಚಿತರಾಗದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಈ ದೂರುಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ನಿಯೋಗದಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ ಹಾಗೂ ಭಾಸ್ಕರ್ ಮೊಯ್ಲಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ