image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಬಲೆ ತುಳು ಓದುಗ' ಅಭಿಯಾನ: ತುಳುನಾಡು ಮಾತೃಮೂಲ ಸಂಸ್ಕೃತಿಯ ನಾಡು ಎಂದ ಹಿರಿಯ ಲೇಖಕಿ ಅತ್ರಾಡಿ ಅಮೃತ ಶೆಟ್ಟಿ

'ಬಲೆ ತುಳು ಓದುಗ' ಅಭಿಯಾನ: ತುಳುನಾಡು ಮಾತೃಮೂಲ ಸಂಸ್ಕೃತಿಯ ನಾಡು ಎಂದ ಹಿರಿಯ ಲೇಖಕಿ ಅತ್ರಾಡಿ ಅಮೃತ ಶೆಟ್ಟಿ

ಮಂಗಳೂರು : ತುಳುನಾಡು ಮಾತೃ ಮೂಲ ಸಂಸ್ಕೃತಿಯ ನಾಡಾಗಿದ್ದು, ನಮ್ಮಲ್ಲಿ ಮಾತೃ ಪ್ರಧಾನ ಸಾಮಾಜಿಕ ವ್ಯವಸ್ಥೆಯಿತ್ತು. ಇವತ್ತಿನ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದ ನಡುವೆಯೂ ಮಹಿಳೆಯರು ತಮ್ಮ ಸ್ಥಾನಮಾನ, ಗೌರವ ಹಾಗೂ ಸಾಮರ್ಥ್ಯದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಮುಂದೆ ನಿಲ್ಲಬೇಕು ಎಂದು ಹಿರಿಯ ಲೇಖಕಿ ಅತ್ರಾಡಿ ಅಮೃತ ಶೆಟ್ಟಿ ಅವರು ಪ್ರತಿಪಾದಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ಸಂವಾದ ಯುವ ಸಂಪನ್ಮೂಲ ಕೇಂದ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 'ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ' ಕಾರ್ಯಕ್ರಮದ 14ನೇ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂವಾದ ಯುವ ಸಂಪನ್ಮೂಲ ಕೇಂದ್ರದ ಯೂತ್ ಆಕ್ಷ್ಯನ್ ಕನ್ವೀನಿಯರ್ ಮಂಜುಳಾ ಸುನಿಲ್ ಅವರು ಮಾತನಾಡಿ, ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ' ಕಾರ್ಯಕ್ರಮವು ಒಂದು ವಿಶಿಷ್ಟ ಪರಿಕಲ್ಪನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಭಾಷೆಯಲ್ಲಿ ಪ್ರಕಟಗೊಂಡಿರುವ ಸಾಹಿತ್ಯದ ಪರಿಚಯ ಇಂದಿನ ವಿದ್ಯಾರ್ಥಿಗಳಿಗೆ ಆಗಬೇಕು ಅನ್ನುವ ಆಶಯದೊಂದಿಗೆ ‘ಬಲೆ ತುಳು ಓದುಗ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ವಿಶಿಷ್ಟ ಅಭಿಯಾನದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರದ ವಿವಿಧ ಕಾಲೇಜುಗಳ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳೆಲ್ಲರೂ ಅಕಾಡೆಮಿಯ ಗ್ರಂಥಾಲಯದಲ್ಲಿದ್ದ ತುಳು ಸಾಹಿತ್ಯ ಕೃತಿಗಳನ್ನು ಆಸಕ್ತಿಯಿಂದ ಓದಿದರಲ್ಲದೆ, ಸಮಾರೋಪ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಚಾಲಕ ಮನೋಜ್ ಕುಮಾರ್ ವೇಣೂರು ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯರಾದ ಪಾಂಗಾಳ ಬಾಬು ಕೊರಗ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಂದನಾರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ