image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇಂದ್ರವನ್ನು ದೂಷಿಸುವುದೇ ಕೆಲವರ ಉದ್ಯೋಗ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ

ಕೇಂದ್ರವನ್ನು ದೂಷಿಸುವುದೇ ಕೆಲವರ ಉದ್ಯೋಗ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ

ಮಂಗಳೂರು : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ವಿವಿಧ ಸಮಕಾಲೀನ ವಿವಾದಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋನಂ ವಾಂಗ್ಚು ಅವರ ಉಪವಾಸ ಸತ್ಯಾಗ್ರಹದ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕೆಲ ಅತಿರೇಕದ ಬುದ್ಧಿಜೀವಿಗಳಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುವುದೇ ಖಾಯಂ ಉದ್ಯೋಗವಾಗಿದೆ ಎಂದು ಟೀಕಿಸಿದರು. ಪ್ರಧಾನಿ ಮೋದಿ ಅವರು ದೇಶ ಮೊದಲು ಎಂದು ಕೆಲಸ ಮಾಡುವ ವಿಶ್ವದ ಅತ್ಯಂತ ಶ್ರೇಷ್ಠ ನಾಯಕರಾಗಿದ್ದು, ಇಂತಹ ಸಣ್ಣಪುಟ್ಟ ತೊಂದರೆಗಳನ್ನು ನಿಭಾಯಿಸುವ ಶಕ್ತಿ ದೇಶಕ್ಕಿದೆ ಎಂದ ಅವರು, ಉಪವಾಸ ಕುಳಿತವರು ತಮ್ಮ ವೈಯಕ್ತಿಕ ಅಭಿಪ್ರಾಯ ಬಿಟ್ಟು ತಮಗಿರುವ ನೈಜ ಸಮಸ್ಯೆಯನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಚರ್ಚಿಸಲು ಸಂಸತ್ತಿನಲ್ಲಿ ಮುಕ್ತ ಅವಕಾಶವಿದ್ದು, ಇಂತಹ ಧರಣಿಗಳಿಗೆ ಜನತೆ ಮೌಲ್ಯ ನೀಡುವುದಿಲ್ಲ ಎಂದರು.

ಬಿಡದಿ ಭೂಸ್ವಾಧೀನ ವಿವಾದದ ಕುರಿತು ಮಾತನಾಡಿದ ಸಂಸದರು, ಯಾವುದೇ ಕಾರಣಕ್ಕೂ ರೈತರು ತಮ್ಮ ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಪ್ರಧಾನಿಗಳು ಈ ವಿಚಾರವಾಗಿ ಗಾಂಧಿ ಪ್ರತಿಮೆ ಎದುರು ಧರಣಿ ಕೂರುವುದಾಗಿ ಹೇಳಿರುವುದು ವಿಷಯದ ಗಾಂಭೀರ್ಯತೆಯನ್ನು ತೋರಿಸುತ್ತದೆ. ಮುಖ್ಯಮಂತ್ರಿಗಳಿಗೆ ಆರಂಭದಲ್ಲಿ ಇದರ ಗಂಭೀರ್ಯತೆ ಗೊತ್ತಿರದಿದ್ದರೂ, ಈಗಲಾದರೂ ರೈತರ ಭಾವನೆಗಳಿಗೆ ಬೆಲೆ ಕೊಟ್ಟು ಬಿಡದಿಯ ಜಮೀನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕು, ಇಲ್ಲದಿದ್ದರೆ ಸರ್ಕಾರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೈಸೂರು ಕಂಬಳ ವಿವಾದದ ಚರ್ಚೆಯನ್ನು ಬಿಜೆಪಿ ಕಡೆಗೆ ತಿರುಗಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಕಂಬಳಕ್ಕೆ ನಿರಂತರವಾಗಿ ಶಕ್ತಿ ತುಂಬಿದ್ದೇ ಬಿಜೆಪಿ ಸರ್ಕಾರ ಎಂದು ನೆನಪಿಸಿದರು. ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಂಬಳಕ್ಕೆ ಪ್ರಥಮ ಬಾರಿಗೆ 5 ಕೋಟಿ ರೂ. ಅನುದಾನ ನೀಡಿದ್ದರು ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಕಂಬಳದ ಗುರಿಕಾರ ಎಂಬ ಕಾರಣಕ್ಕೆ ಶಾಂತರಾಮ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು ಎಂದು ಪಟ್ಟಿ ಮಾಡಿದರು. ಮೈಸೂರಿನಲ್ಲಿ 10 ಕೋಟಿ ರೂ. ಖರ್ಚು ಮಾಡಿ ಕಂಬಳ ನಡೆಸುವ ಅಗತ್ಯವಿಲ್ಲ ಎಂದು ಅಲ್ಲಿನ ಸ್ಥಳೀಯರೇ ಹೇಳುತ್ತಿದ್ದಾರೆ. ಆದ್ದರಿಂದ ಕರಾವಳಿಯ ರೈತರು ಹಾಗೂ ಮಾಲೀಕರನ್ನು ಕರೆದು ಮಾತನಾಡಿ ಸಮಸ್ಯೆ bಗೆಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ತನ್ನದೇ ಸರಿ ಎಂಬ ಹಠ ಸಾಧನೆ ಬಿಡಬೇಕು ಎಂದರು.

ರಾಜ್ಯದ ಬರಗಾಲದ ಪರಿಸ್ಥಿತಿಯ ಕುರಿತು ಮಾತನಾಡುತ್ತಾ, ಕೇಂದ್ರ ಸರ್ಕಾರವನ್ನು ಅನಗತ್ಯವಾಗಿ ದೂಷಿಸುವ ಬದಲು ರಾಜ್ಯ ಸರ್ಕಾರ ಮೊದಲು ಎಷ್ಟು ಬರಗಾಲವಿದೆ ಎಂದು ಸರಿಯಾಗಿ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು. ನೆರವು ಕೇಳುವ ಹಕ್ಕು ರಾಜ್ಯಕ್ಕಿದ್ದರೂ, ಮೊದಲು ತಾನು ಎಷ್ಟು ಹಣ ಒದಗಿಸುತ್ತೇನೆ ಎಂಬುದನ್ನು ಸ್ಪಷ್ಟಪಡಿಸಬೇಕು. ರಾಜ್ಯ ಸರ್ಕಾರ ಬಡವರಿಗೆ ಒಂದು ಮನೆಯನ್ನೂ ಕೊಟ್ಟಿಲ್ಲ ಹಾಗೂ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಕರ್ನಾಟಕದಲ್ಲಿ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ರವನ್ನು ಬಿಜೆಪಿ ವಿರೋಧಿಸಿಲ್ಲ, ಬದಲಿಗೆ ಕೇವಲ ವಿಮರ್ಶೆ ಮಾಡಿದೆ ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ