image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀಟ್–2026 ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಅಭೂತಪೂರ್ವ ಸಾಧನೆ

ನೀಟ್–2026 ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ ಅಭೂತಪೂರ್ವ ಸಾಧನೆ

ಮೂಡುಬಿದಿರೆ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET-2026) ಫಲಿತಾಂಶದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯಾಕರ್ಷಕ ಹಾಗೂ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಒಂದೇ ಕ್ಯಾಂಪಸ್‌ನ ಕ್ಲಾಸ್‌ರೂಮ್ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಂಸ್ಥೆಯ ಒಟ್ಟು 21 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಅಭೂತಪೂರ್ವ ಕೀರ್ತಿ ತಂದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.

ಅಖಿಲ ಭಾರತ ಮಟ್ಟದ ವೈದ್ಯಕೀಯ ರ‍್ಯಾಂಕಿಂಗ್‌ನ ಕೆಟಗರಿ ವಿಭಾಗದಲ್ಲಿ ಆಳ್ವಾಸ್‌ನ ಸೂರ್ಯಕಾಂತ್ ಪಾಟೀಲ್ ರಾಷ್ಟ್ರಮಟ್ಟದಲ್ಲಿ 97ನೇ ರ‍್ಯಾಂಕ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಉಳಿದಂತೆ ಚೇತನ್ ಯರನಾಳ್ 239ನೇ ರ‍್ಯಾಂಕ್, ಕ್ಲಾರೆನ್ಸ್ ಡಿ’ಸೋಜಾ 724ನೇ ರ‍್ಯಾಂಕ್ ಹಾಗೂ ದೀಕ್ಷಿತಾ ಕೆ.ಎಸ್ 951ನೇ ರ‍್ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಕೆಟಗರಿ ವಿಭಾಗದಲ್ಲಿ ಟಾಪ್ 500 ರ‍್ಯಾಂಕ್‌ನ ಒಳಗೆ 3 ವಿದ್ಯಾರ್ಥಿಗಳು, ಟಾಪ್ 1000 ರ‍್ಯಾಂಕ್‌ನ ಒಳಗೆ 14 ವಿದ್ಯಾರ್ಥಿಗಳು, ಟಾಪ್ 2000 ರ‍್ಯಾಂಕ್‌ನ ಒಳಗೆ 26 ವಿದ್ಯಾರ್ಥಿಗಳು ಹಾಗೂ ಟಾಪ್ 5000 ರ‍್ಯಾಂಕ್‌ನ ಒಳಗೆ ಸಂಸ್ಥೆಯ ಒಟ್ಟು 72 ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಂಕಗಳ ಗಳಿಕೆಯಲ್ಲಿಯೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದು, ಆಳ್ವಾಸ್‌ನ 10 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಹಾಗೂ 161 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ಒಟ್ಟು 467 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದು, ಈ ಪೈಕಿ ಜನರಲ್ ಕೆಟಗರಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಹೈದ್ರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ, ವಿಶಿಷ್ಟ ಚೇತನರು ಹಾಗೂ ಆರ್ಥಿಕ ಹಿಂದುಳಿದ ವರ್ಗದ (EWS) ಕೋಟಾಗಳ ಅಡಿಯಲ್ಲಿ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾದಡಿ ಎಂಬಿಬಿಎಸ್ (MBBS) ಸೀಟು ಪಡೆಯುವ ಬಲವಾದ ನಿರೀಕ್ಷೆಯಿದೆ.

ಸಂಸ್ಥೆಯ ಪ್ರಮುಖ ಸಾಧಕರಾದ ಸೂರ್ಯಕಾಂತ್ ಪಾಟೀಲ್ (653 ಅಂಕ), ಕ್ಲಾರೆನ್ಸ್ ಡಿ’ಸೋಜ (612 ಅಂಕ), ವೈಭವಿ ಎಮ್ (611 ಅಂಕ), ಆಯುಶ್ ಕಲ್ಗುಡಿ (611 ಅಂಕ), ಪರಿಣಿತ್ ಗೌಡ ಬಿ.ಎಲ್ (605 ಅಂಕ), ಲೋಕೆಶ್ ಬಿ.ಎನ್ (605 ಅಂಕ), ದೀಕ್ಷಿತ ಕೆ.ಎಸ್ (604 ಅಂಕ), ಬಶೀರ್ ಅಹಮ್ಮದ್ (601 ಅಂಕ), ಸುಹರ್ಷ ಎಚ್.ಎಚ್ (600 ಅಂಕ) ಹಾಗೂ ಮಲ್ಲಿಕಾರ್ಜುನ ಎಸ್.ಎಚ್ (600 ಅಂಕ) ಅತ್ಯುನ್ನತ ಸ್ಕೋರ್ ಗಳಿಸಿದ್ದಾರೆ. ಇವರೊಂದಿಗೆ ಕೀರ್ತನ ವೈ.ಸಿ, ರಾಹುಲ್ ಜಂಬಗಿ, ಸಿದ್ಧರೂಢ ಶ್ರೀಶೈಲ, ತ್ವಿಶಾ ಎಸ್ ಭಂಡಾರಿ, ಕುಶಲ್ ಗೌಡ ಎಮ್.ಎಸ್, ಮಹಮ್ಮದ್ ಅಶೀಮ್, ಸೃಜನ್ ವಿ, ಗೋಕುಲ್ ಎಸ್, ಸಂಕೇತ್ ಎ.ಜಿ, ಯಶಸ್ವಿನಿ ವೈ.ಇ ಮತ್ತು ದರ್ಶನ್ ಕಲ್ಲಯ್ಯ ಪೂಜಾರ್ ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ. ಸದಾಕತ್ ಹಾಗೂ ಆಡಳಿತಾಧಿಕಾರಿ ಪ್ರೊ. ಪ್ರದೀಪ ಕುಮಾರ್ ಎಂ. ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ