ಮಂಗಳೂರು : ಬಿ.ಸಿ ರೋಡ್ ಬಸ್ ನಿಲ್ದಾಣದ ಬಳಿ ಸಂಜೆ ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಲಾವಣ್ಯ ಎಂಬ ಯುವತಿಯನ್ನು ಯುವಕನೊಬ್ಬ ಹಾಡಹಗಲೇ ಸಾರ್ವಜನಿಕವಾಗಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ದುಷ್ಕರ್ಮಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಈ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಂಸದರು, ದಕ್ಷಿಣ ಕನ್ನಡದಂತಹ ಸುಶಿಕ್ಷಿತ ಜಿಲ್ಲೆಯಲ್ಲಿ ನಾಗರಿಕ ಸಮಾಜವೇ ಬೆಚ್ಚಿ ಬೀಳಿಸುವಂಥ ಇಂತಹ ಹೇಯ ಕೃತ್ಯ ನಡೆದಿರುವುದು ನಿಜಕ್ಕೂ ಆತಂಕ ಮೂಡಿಸುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ಇಂತಹ ಹಿಂಸಾತ್ಮಕ ಹಾಗೂ ಕಾನೂನುಬಾಹಿರ ಕೃತ್ಯಗಳತ್ತ ಮುಖ ಮಾಡುತ್ತಿರುವುದು ತೀವ್ರ ಆತಂಕಕಾರಿ ಮತ್ತು ನೋವಿನ ಸಂಗತಿಯಾಗಿದೆ. ಸಮಾಜದಲ್ಲಿ ಯಾರ ಭಯವೂ ಇಲ್ಲದೆ ಕಾನೂನನ್ನು ಕೈಗೆತ್ತಿಕೊಂಡು ಅಟ್ಟಹಾಸ ಮೆರೆಯುವ ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಯುವಕರು ಅಡ್ಡದಾರಿ ಹಿಡಿದು ಅಪರಾಧ ಕೃತ್ಯಗಳನ್ನು ಎಸಗುವ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ಇಡೀ ಸಮಾಜಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಆರೋಪಿಯನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಒತ್ತಾಯಿಸಿರುವ ಸಂಸದರು, ಆತನಿಗೆ ಅತ್ಯಂತ ಕಠಿಣ ಹಾಗೂ ತ್ವರಿತವಾಗಿ ಶಿಕ್ಷೆಯಾಗುವಂತೆಯೂ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, "ಮಗಳನ್ನು ಕಳೆದುಕೊಂಡ ಮೃತ ಲಾವಣ್ಯ ಅವರ ಕುಟುಂಬಕ್ಕೆ ಈ ಭೀಕರ ಆಘಾತವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ," ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.