ಮಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಮತ್ತು ರಂಗಕರ್ಮಿ ಪರಮಾನಂದ ಸಾಲ್ಯಾನ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಗಣ್ಯರು ಪರಮಾನಂದ ಸಾಲ್ಯಾನ್ ಅವರೊಂದಿಗಿನ ಒಡನಾಟ ಮತ್ತು ಅವರ ವ್ಯಕ್ತಿತ್ವವನ್ನು ಸ್ಮರಿಸಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಪರಮಾನಂದ ಸಾಲ್ಯಾನ್ ಅವರು ಪತ್ರಿಕಾ ರಂಗದ ಜೊತೆಗೆ ತುಳು ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಭೂತಾರಾಧಾನೆ, ನಾಟಕ ಹಾಗೂ ತುಳುನಾಡಿನ ಸಂಸ್ಕೃತಿಯ ಕುರಿತು ಅವರಿಗಿದ್ದ ವಿಶೇಷ ಆಸಕ್ತಿ ಮತ್ತು ಜ್ಞಾನ ಎಲ್ಲರಿಗೂ ಮಾದರಿಯಾಗಿತ್ತು. ವಿಶೇಷವಾಗಿ ಕಿರಿಯ ಪತ್ರಕರ್ತರಿಗೆ ಅವರು ಮಾರ್ಗದರ್ಶನ ನೀಡುತ್ತಿದ್ದ ರೀತಿ ವಿಶಿಷ್ಟವಾಗಿತ್ತು ಎಂದು ನೆನೆದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ, ಸಾಲ್ಯಾನ್ ಅವರು ಬಹುಮುಖ ಪ್ರತಿಭೆಯಾಗಿದ್ದರು ಮತ್ತು ಎಲ್ಲರೊಂದಿಗೆ ಅತ್ಯಂತ ಸ್ನೇಹಪರರಾಗಿ ಬೆರೆಯುತ್ತಿದ್ದರು. ಅವರಲ್ಲಿದ್ದ ತುಳು ಭಾಷೆಯ ಮೇಲಿನ ಹಿಡಿತ, ಭಾಷಾ ಶುದ್ಧತೆ ಮತ್ತು ಸಂಸ್ಕೃತಿಯ ಬಗೆಗಿನ ಕಾಳಜಿ ಮುಂದಿನ ಪೀಳಿಗೆಗೆ ಸದಾ ದಾರಿದೀಪವಾಗಿ ಉಳಿಯಲಿದೆ ಎಂದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಮಾಜಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ಭಾಸ್ಕರ ರೈ ಕಟ್ಟ ಮತ್ತು ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ವಿಲ್ಫ್ರೆಡ್ ಡಿಸೋಜ, ರಾಜೇಶ್ ಶೆಟ್ಟಿ, ರಾಜೇಶ್ ದಡ್ಡಂಗಡಿ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದು ಅಗಲಿದ ಚೇತನಕ್ಕೆ ಗೌರವ ನಮನ ಸಲ್ಲಿಸಿದರು.