ಧರ್ಮಸ್ಥಳ: ಗುರುವಾರ ಆಯೋಜಿಸಲಾಗಿದ್ದ 55ನೇ ವರ್ಷದ ಪುರಾಣ ಕಾವ್ಯ ವಾಚನ-ಪ್ರವಚನ ಕಾರ್ಯಕ್ರಮವನ್ನು ಕನ್ಯಾಡಿ ರಾಮಕ್ಷೇತ್ರದ ಪೀಠಾಧಿಪತಿಗಳಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜ್ಞಾನ ದಾಸೋಹದಿಂದ ಆತ್ಮ ಸಾಕ್ಷಾತ್ಕಾರವಾಗುತ್ತದೆ ಮತ್ತು ಭಗವಂತನ ಸಾನ್ನಿಧ್ಯದೊಂದಿಗೆ ಶಾಶ್ವತ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂದು ಪ್ರತಿಪಾದಿಸಿದರು. ಪುರಾಣ ಕಾವ್ಯ ವಾಚನ-ಪ್ರವಚನಗಳು ಅಮೂಲ್ಯವಾದ ಜ್ಞಾನಸತ್ರವಾಗಿದ್ದು, ಭಕ್ತರು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.
ದೇಹ ನಶ್ವರ ಹಾಗೂ ಆತ್ಮ ಶಾಶ್ವತವಾಗಿದ್ದು, ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಬೇಕು. ಜ್ಞಾನಯೋಗ ಮತ್ತು ಕರ್ಮಯೋಗದ ಮೂಲಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ತಿಳಿಸುತ್ತಾ, ಪಂಚೇಂದ್ರಿಯಗಳ ನಿಯಂತ್ರಣ ಮತ್ತು ಅರಿಷಡ್ವರ್ಗಗಳನ್ನು ಗೆಲ್ಲುವ ಮೂಲಕ ಧರ್ಮದ ಮರ್ಮವನ್ನು ಅರಿಯಬೇಕು ಎಂದು ಕರೆ ನೀಡಿದರು. ಅಲ್ಲದೆ, ಜೈನ ಧರ್ಮದ "ಸಮ್ಯಕ್‌ದರ್ಶನ, ಜ್ಞಾನ, ಚಾರಿತ್ರಾಣಿ ಮೋಕ್ಷ ಮಾರ್ಗಃ" ಎಂಬ ರತ್ನತ್ರಯ ಧರ್ಮದ ಪಾಲನೆಯ ಮಹತ್ವವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸಮಯವು ಅತ್ಯಂತ ಅಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಕಾಲಪ್ರಜ್ಞೆಯನ್ನು ಮೈಗೂಡಿಸಿಕೊಂಡು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಧರ್ಮದ ಮಾರ್ಗದಲ್ಲಿ ನಡೆದು ಅದರ ಮರ್ಮವನ್ನು ಅರಿತು ಅನುಷ್ಠಾನಗೊಳಿಸಿದರೆ ಜೀವನ ಪಾವನವಾಗುತ್ತದೆ, ಧರ್ಮದಿಂದ ವಿಮುಖರಾದರೆ ಸರ್ವನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು. ಪುರಾಣ ಕಾವ್ಯ ವಾಚನ-ಪ್ರವಚನಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಾಲವನ್ನು ಸಾರ್ಥಕಪಡಿಸಿಕೊಳ್ಳುವಂತೆ ಅವರು ಭಕ್ತರಿಗೆ ಕರೆ ನೀಡಿದರು. ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸ್ವಾಗತಿಸಿದರೆ, ಶ್ರೀನಿವಾಸ ರಾವ್ ಧರ್ಮಸ್ಥಳ ವಂದನಾರ್ಪಣೆ ಮಾಡಿದರು.