ಮಂಗಳೂರು: ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಭಾಷಾ ವಿಭಾಗಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಮತ್ತು ಅವುಗಳನ್ನು ಮುಚ್ಚುತ್ತಿರುವುದನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತೀವ್ರವಾಗಿ ಖಂಡಿಸಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿರುವ ಮಂಗಳೂರು ವಿಶ್ವವಿದ್ಯಾನಿಲಯವು ಭಾಷಾ ಮತ್ತು ಸಾಂಸ್ಕೃತಿಕ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕಿತ್ತು, ಆದರೆ ಇತ್ತೀಚಿನ ಆಡಳಿತಾತ್ಮಕ ನಿರ್ಧಾರಗಳು ಶೈಕ್ಷಣಿಕ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಕಳವಳ ವ್ಯಕ್ತಪಡಿಸಿದ್ದಾರೆ. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,
ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿದ್ದ ತುಳು, ಕೊಂಕಣಿ ಮತ್ತು ಹಿಂದಿ ಸ್ನಾತಕೋತ್ತರ ವಿಭಾಗಗಳ ಪ್ರವೇಶ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದು, ಶುಲ್ಕವನ್ನು ಹೆಚ್ಚಿಸಿರುವುದು ಮತ್ತು ವಿದ್ಯಾರ್ಥಿಗಳ ಕೊರತೆಯನ್ನು ನೆಪವಾಗಿಟ್ಟುಕೊಂಡು ಈ ವಿಭಾಗಗಳನ್ನು ಮುಚ್ಚುತ್ತಿರುವುದು ಖಂಡನೀಯವಾಗಿದೆ. ಈ ವಿಭಾಗಗಳನ್ನು ನಗರ ಕೇಂದ್ರದಿಂದ 15-20 ಕಿಲೋಮೀಟರ್ ದೂರದ ವಿಶ್ವವಿದ್ಯಾನಿಲಯ ಆವರಣಕ್ಕೆ ಸ್ಥಳಾಂತರಿಸಿರುವುದು ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲವನ್ನು ಉಂಟುಮಾಡಿದೆ. ಒಡಿಯೂರು ಶ್ರೀಗುರುದೇವ ದತ್ತ ಸಂಸ್ಥಾನದ ನೆರವಿನಿಂದ ಆರಂಭವಾಗಿದ್ದ ತುಳು ಅಧ್ಯಯನ ಕೇಂದ್ರವನ್ನು ಮುಚ್ಚಿರುವುದು ಈ ಭಾಷೆಗಳಿಗೆ ಮಾಡಿದ ಅವಮಾನ ಎಂದು ಪರಿಷತ್ ಆರೋಪಿಸಿದೆ. ನೂರಾರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿಗಳನ್ನು ನೀಡಿ, ಸಮಾಜಕ್ಕೆ ಶಿಕ್ಷಕರನ್ನು ಒದಗಿಸುತ್ತಿದ್ದ ಇಂತಹ ಯಶಸ್ವಿ ವಿಭಾಗಗಳನ್ನು ಮುಚ್ಚುವುದು ಭಾರತೀಯ ಭಾಷೆಗಳ ಅಭಿವೃದ್ಧಿಗೆ ದೊಡ್ಡ ಹೊಡೆತವಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯವು ತುಳು, ಕನ್ನಡ ಮತ್ತು ಕೊಂಕಣಿಯಂತಹ ಭಾಷೆಗಳ ಅಧ್ಯಯನ ಮತ್ತು ಸಂಶೋಧನೆಗೆ ವಿಶೇಷ ಉತ್ತೇಜನ ನೀಡಬೇಕಾದ ಜವಾಬ್ದಾರಿಯನ್ನು ಹೊಂದಿದೆ. ಆದ್ದರಿಂದ, ವಿಶ್ವವಿದ್ಯಾನಿಲಯದ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಮುಚ್ಚಲ್ಪಟ್ಟಿರುವ ಭಾರತೀಯ ಭಾಷಾ ಸ್ನಾತಕೋತ್ತರ ವಿಭಾಗಗಳನ್ನು ತಕ್ಷಣ ಪುನರಾರಂಭಿಸಬೇಕು. ವಿದ್ಯಾರ್ಥಿ ಸ್ನೇಹಿ ನೀತಿಗಳನ್ನು ಜಾರಿಗೊಳಿಸಿ, ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಘನತೆಯನ್ನು ಮರುಸ್ಥಾಪಿಸಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಗೀತಾ ಲಕ್ಷ್ಮೀಶ್, ಸುರೇಶ್, ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.