ಕಾರ್ಕಳ : ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸುವ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಕಂಬಳ ನಡೆಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಸರ್ಕಾರ, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಕರಾವಳಿಯ ಕಂಬಳ ಆಯೋಜಕರು ಹಾಗೂ ಕೋಣಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಂಬಳವು ಕರಾವಳಿಯ ಸಾಂಸ್ಕೃತಿಕ ಅನನ್ಯತೆ ಮತ್ತು ಇತಿಹಾಸವನ್ನು ಒಳಗೊಂಡಿರುವ ವಿಶಿಷ್ಟ ಕ್ರೀಡೆಯಾಗಿದೆ. ಭಾಷೆ, ಕಲೆ, ಮತ್ತು ಆಚರಣೆಗಳು ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗುವುದರಿಂದ, ಕರಾವಳಿಯ ಈ ಹೆಮ್ಮೆಯ ಕ್ರೀಡೆಯನ್ನು ದಸರಾ ನೆಪದಲ್ಲಿ ಮೈಸೂರಿಗೆ ರಫ್ತು ಮಾಡುವಾಗ ಉಂಟಾಗುವ ಒಟ್ಟಾರೆ ಪರಿಣಾಮಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು ಅತ್ಯಗತ್ಯ. ಹೀಗಾಗಿ ಮೈಸೂರಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವ ಮೊದಲು, ಕಂಬಳದ ನೈಜ ಭಾಗೀದಾರರಾದ ಕರಾವಳಿಯ ಸ್ಥಳೀಯ ಸಂಘಟಕರನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ದಸರಾ ಕಂಬಳಕ್ಕಾಗಿ ಅಂದಾಜು 8 ಕೋಟಿ ರೂಪಾಯಿ ವೆಚ್ಚ ಮಾಡಲು ಸರ್ಕಾರ ಮುಂದಾಗಿರುವ ಯೋಜನೆಗೆ ಸುನಿಲ್ ಕುಮಾರ್ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಕಂಬಳಗಳಿಗೆ ಹಾಲಿ ಸರ್ಕಾರ ಬಂದ ನಂತರ ಕೇವಲ 2.5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲು ಸತಾಯಿಸುತ್ತಿದೆ. ಈ ತಾರತಮ್ಯದ ವಿರುದ್ಧ ತಾವು ಸದನದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಿರುವುದನ್ನು ನೆನಪಿಸಿದ ಅವರು, ಸರ್ಕಾರ ಮೊದಲು ಕರಾವಳಿಯ ಜಿಲ್ಲಾಮಟ್ಟದ 20 ಕಂಬಳಗಳಿಗೆ ತಲಾ 25 ಲಕ್ಷ ರೂಪಾಯಿ ಧನಸಹಾಯ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳೀಯವಾಗಿ ಕಂಬಳದ ವೈಭವವನ್ನು ಹೆಚ್ಚಿಸಿ, ಹೊರ ಜಿಲ್ಲೆಗಳ ಪ್ರವಾಸಿಗರು ಇಲ್ಲಿಗೇ ಬಂದು ವೀಕ್ಷಿಸುವಂತಹ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಬೇಕು. ಆದ್ದರಿಂದ ಕರಾವಳಿಯ ಕ್ರೀಡಾ ಸಂಸ್ಕೃತಿಗೆ ಧಕ್ಕೆಯಾಗದಂತೆ ಹಾಗೂ ಸ್ಥಳೀಯ ಕಂಬಳಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಆಯೋಜಕರ ಸಭೆ ಕರೆಯಬೇಕು ಎಂದು ಕಂಬಳದ ಆಯೋಜಕರೂ ಆಗಿರುವ ಶಾಸಕ ವಿ. ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.